ಬೆಂಗಳೂರು: ದೇಶದ ಪ್ರಮುಖ ಎಐ-ಚಾಲಿತ ಸ್ಥಳೀಯ ಭಾಷಾ ತಂತ್ರಜ್ಞಾನ ಸಂಸ್ಥೆ ಹಾಗೂ ಜನಪ್ರಿಯ ಆ್ಯಪ್‌ಗಳಾದ ಡೈಲಿಹಂಟ್ (Dailyhunt) ಮತ್ತು ಜೋಶ್ (Josh) ನ ಮಾತೃಸಂಸ್ಥೆಯಾದ ‘ವರ್ಸ್ ಇನ್ನೋವೇಶನ್’ (VerSe Innovation), ತನ್ನ ಆಡಳಿತ ಮಂಡಳಿಯಲ್ಲಿ ಮಹತ್ವದ ಬದಲಾವಣೆ ಮಾಡಿಕೊಂಡಿದೆ. ಡೆಲಾಯ್ಟ್ ಇಂಡಿಯಾದ ಮಾಜಿ ಅಧ್ಯಕ್ಷ ಪಿ.ಆರ್. ರಮೇಶ್ ಅವರನ್ನು ಕಂಪನಿಯ ನೂತನ ಸ್ವತಂತ್ರ ನಿರ್ದೇಶಕರನ್ನಾಗಿ ನೇಮಕ ಮಾಡಿರುವುದಾಗಿ ಮಂಗಳವಾರ ಘೋಷಿಸಿದೆ.
ಕೇವಲ ನಿರ್ದೇಶಕರಾಗಿ ಮಾತ್ರವಲ್ಲದೆ, ರಮೇಶ್ ಅವರು ಕಂಪನಿಯ ಲೆಕ್ಕಪರಿಶೋಧನಾ ಸಮಿತಿಯ (Audit Committee) ಅಧ್ಯಕ್ಷರಾಗಿಯೂ ಜವಾಬ್ದಾರಿ ನಿಭಾಯಿಸಲಿದ್ದಾರೆ.
ಯಾರು ಈ ಪಿ.ಆರ್. ರಮೇಶ್?
ಪಿ.ಆರ್. ರಮೇಶ್ ಅವರು ಚಾರ್ಟರ್ಡ್ ಅಕೌಂಟೆಂಟ್ ವೃತ್ತಿಯಲ್ಲಿ 40 ವರ್ಷಗಳಿಗೂ ಹೆಚ್ಚು ಕಾಲದ ಅಪಾರ ಅನುಭವ ಹೊಂದಿದ್ದಾರೆ. ಇವರ ಹಿನ್ನೆಲೆಯ ಪ್ರಮುಖ ಅಂಶಗಳು ಹೀಗಿವೆ:
ಡೆಲಾಯ್ಟ್ ನಾಯಕತ್ವ: ಡೆಲಾಯ್ಟ್ ಇಂಡಿಯಾದ ಮಾಜಿ ಅಧ್ಯಕ್ಷರಾಗಿ ಮತ್ತು ಡೆಲಾಯ್ಟ್ ಗ್ಲೋಬಲ್ ಬೋರ್ಡ್‌ನ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಪ್ರಮುಖ ಕಂಪನಿಗಳ ಸಲಹೆಗಾರ: ಪ್ರಸ್ತುತ ಏರ್ ಇಂಡಿಯಾ, ಸಿಪ್ಲಾ, ನೆಸ್ಲೆ ಇಂಡಿಯಾ, ಎಚ್‌ಡಿಎಫ್‌ಸಿ (HDFC) ಮತ್ತು ಎಲ್ ಅಂಡ್ ಟಿಯಂತಹ ಪ್ರತಿಷ್ಠಿತ ಸಂಸ್ಥೆಗಳ ಆಡಳಿತ ಮಂಡಳಿಯಲ್ಲಿದ್ದಾರೆ.
ನಿಯಂತ್ರಕ ಸಂಸ್ಥೆಗಳ ಒಡನಾಟ: ಸೆಬಿ (SEBI), ಆರ್‌ಬಿಐ (RBI) ಮತ್ತು ಐಆರ್‌ಡಿಎ (IRDA) ಸಲಹಾ ಸಮಿತಿಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಇವರಿಗಿದೆ.
ಗೌರವ: 2022-23ನೇ ಸಾಲಿನಲ್ಲಿ ಇವರಿಗೆ ‘ಅತ್ಯುತ್ತಮ ಸ್ವತಂತ್ರ ನಿರ್ದೇಶಕ’ ಪ್ರಶಸ್ತಿ ಲಭಿಸಿದೆ.
ತಮ್ಮ ಹೊಸ ಜವಾಬ್ದಾರಿಯ ಬಗ್ಗೆ ಮಾತನಾಡಿದ ಪಿ.ಆರ್. ರಮೇಶ್:
“ವರ್ಸ್ ಇನ್ನೋವೇಶನ್ ಡಿಜಿಟಲ್ ಲೋಕದಲ್ಲಿ ಬೃಹತ್ ಸಾಮ್ರಾಜ್ಯವನ್ನೇ ನಿರ್ಮಿಸಿದೆ. ಕೇವಲ ನಾವೀನ್ಯತೆ ಮಾತ್ರವಲ್ಲದೆ, ಶಿಸ್ತು ಮತ್ತು ಹೊಣೆಗಾರಿಕೆಯಿಂದ ಸಂಸ್ಥೆಗಳು ಬಲಗೊಳ್ಳುತ್ತವೆ. ಈ ನಿಟ್ಟಿನಲ್ಲಿ ಕಂಪನಿಯ ಮ್ಯಾನೇಜ್ಮೆಂಟ್ ತಂಡದೊಂದಿಗೆ ಕೆಲಸ ಮಾಡಲು ನಾನು ಉತ್ಸುಕನಾಗಿದ್ದೇನೆ,” ಎಂದಿದ್ದಾರೆ.
ಯೂನಿಕಾರ್ನ್ ಪಯಣಕ್ಕೆ ಆನೆಬಲ
ಗೂಗಲ್, ಮೈಕ್ರೋಸಾಫ್ಟ್ ಮತ್ತು ಸಿಕ್ವೊಯಾ ಕ್ಯಾಪಿಟಲ್‌ನಂತಹ ಜಾಗತಿಕ ಹೂಡಿಕೆದಾರರ ಬೆಂಬಲ ಹೊಂದಿರುವ ವರ್ಸ್ ಇನ್ನೋವೇಶನ್, ಭಾರತದ ಮೊದಲ ‘ಸ್ಥಳೀಯ ಭಾಷಾ ಟೆಕ್ ಯೂನಿಕಾರ್ನ್’ ಎನಿಸಿಕೊಂಡಿದೆ. ಈಗ ರಮೇಶ್ ಅವರ ನೇಮಕಾತಿಯು ಕಂಪನಿಯ ಆಂತರಿಕ ನಿಯಂತ್ರಣ, ಅಪಾಯ ನಿರ್ವಹಣೆ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ.








