ಕಳೆದ 22 ವರ್ಷಗಳಿಂದ ಜಿಮೇಲ್ ಬಳಕೆದಾರರನ್ನು ಕಾಡುತ್ತಿದ್ದ ಅತಿದೊಡ್ಡ ಸಮಸ್ಯೆಗೆ ಗೂಗಲ್ ಕೊನೆಗೂ ಪರಿಹಾರ ನೀಡಿದೆ. ನಿಮ್ಮ ಹಳೆಯ ಜಿಮೇಲ್ ಅಡ್ರೆಸ್ ಇಷ್ಟವಾಗದಿದ್ದರೆ ಅಥವಾ ಅದು ಹಳೆಯದಾಗಿದ್ದರೆ, ಈಗ ನಿಮ್ಮ ಇಮೇಲ್, ಫೋಟೋಗಳು ಮತ್ತು ಡ್ರೈವ್ ಡೇಟಾವನ್ನು ಕಳೆದುಕೊಳ್ಳದೆಯೇ ಹೊಸ ಜಿಮೇಲ್ ಐಡಿಯನ್ನು (Gmail ID) ಹೊಂದಲು ಗೂಗಲ್ ಅವಕಾಶ ಕಲ್ಪಿಸಿದೆ.
ಈ ಮೊದಲು ಹೊಸ ಐಡಿ ಬೇಕೆಂದರೆ ಹಳೆಯ ಖಾತೆಯನ್ನು ಬಿಟ್ಟು ಹೊಸದಾಗಿ ಎಲ್ಲವನ್ನೂ ಆರಂಭಿಸಬೇಕಿತ್ತು. ಆದರೆ ಈಗ, ನಿಮ್ಮ ಎಲ್ಲಾ ಹಳೆಯ ಇಮೇಲ್‌ಗಳು, ಗೂಗಲ್ ಫೋಟೋಸ್, ಡ್ರೈವ್ ಫೈಲ್‌ಗಳು ಮತ್ತು ಕಾಂಟ್ಯಾಕ್ಟ್‌ಗಳು ಯಾವುದೇ ಬದಲಾವಣೆಯಿಲ್ಲದೆ ಹೊಸ ಐಡಿಗೆ ವರ್ಗಾವಣೆಯಾಗಲಿವೆ.
ನೀವು ಐಡಿ ಬದಲಾಯಿಸಿದ ನಂತರ, ನಿಮ್ಮ ಹಳೆಯ ಜಿಮೇಲ್ ವಿಳಾಸವು ‘ಅಲಿಯಾಸ್’ (Alias) ಅಥವಾ ಪರ್ಯಾಯ ವಿಳಾಸವಾಗಿ ಉಳಿಯುತ್ತದೆ. ಅಂದರೆ, ಯಾರಾದರೂ ನಿಮ್ಮ ಹಳೆಯ ಐಡಿಗೆ ಇಮೇಲ್ ಕಳುಹಿಸಿದರೂ ಅದು ನಿಮ್ಮ ಹೊಸ ಇನ್‌ಬಾಕ್ಸ್‌ಗೆ ಬಂದು ಸೇರುತ್ತದೆ.
ನೀವು ಹೊಸ ಐಡಿ ಅಥವಾ ಹಳೆಯ ಐಡಿ ಎರಡನ್ನೂ ಬಳಸಿ ನಿಮ್ಮ ಗೂಗಲ್ ಖಾತೆಗೆ ಲಾಗಿನ್ ಆಗಬಹುದಾಗಿದೆ.ಗೂಗಲ್ ಈ ಸೌಲಭ್ಯಕ್ಕೆ ಕೆಲವು ಮಿತಿಗಳನ್ನು ಹೇರಿದೆ. ಒಬ್ಬ ಬಳಕೆದಾರ ವರ್ಷಕ್ಕೆ ಒಮ್ಮೆ ಮಾತ್ರ ಐಡಿ ಬದಲಾಯಿಸಬಹುದು ಮತ್ತು ಜೀವಿತಾವಧಿಯಲ್ಲಿ ಗರಿಷ್ಠ ಮೂರು ಬಾರಿ ಮಾತ್ರ ಬದಲಾವಣೆಗೆ ಅವಕಾಶವಿರುತ್ತದೆ.
ಜಿಮೇಲ್ ಐಡಿ ಬದಲಾಯಿಸುವುದು ಹೇಗೆ? (ಹಂತಗಳು):
ನಿಮ್ಮ Google Account ಸೆಟ್ಟಿಂಗ್ಸ್‌ಗೆ ಹೋಗಿ.
ಅಲ್ಲಿ ‘Personal info’ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.
ನಂತರ ‘Contact info’ ವಿಭಾಗದಲ್ಲಿರುವ ‘Email’ ಮೇಲೆ ಟ್ಯಾಪ್ ಮಾಡಿ.
ಅಲ್ಲಿ ‘Google Account email’ ಅಡಿಯಲ್ಲಿ ‘Change’ ಅಥವಾ ಎಡಿಟ್ ಐಕಾನ್ ಕಾಣಿಸಿದರೆ, ನೀವು ಐಡಿ ಬದಲಾಯಿಸಲು ಅರ್ಹರಿದ್ದೀರಿ ಎಂದರ್ಥ.
ನಿಮ್ಮ ಹೊಸ ಯೂಸರ್ ನೇಮ್ ನಮೂದಿಸಿ ಮತ್ತು ಅದನ್ನು ಸೇವ್ ಮಾಡಿ.
ಪ್ರಸ್ತುತ ಈ ಫೀಚರ್ ಅನ್ನು ಹಂತ-ಹಂತವಾಗಿ ರೋಲ್-ಔಟ್ ಮಾಡಲಾಗುತ್ತಿದೆ. ಈಗಾಗಲೇ ಅಮೆರಿಕದ ಬಳಕೆದಾರರಿಗೆ ಇದು ಲಭ್ಯವಿದ್ದು, ಭಾರತ ಸೇರಿದಂತೆ ಇತರ ದೇಶಗಳ ಬಳಕೆದಾರರಿಗೆ ಶೀಘ್ರದಲ್ಲೇ ಈ ಸೌಲಭ್ಯ ಸಿಗಲಿದೆ. ಒಂದು ವೇಳೆ ನಿಮ್ಮ ಸೆಟ್ಟಿಂಗ್ಸ್‌ನಲ್ಲಿ ಈ ಆಯ್ಕೆ ಕಾಣಿಸದಿದ್ದರೆ, ಇನ್ನಷ್ಟು ದಿನ ಕಾಯಬೇಕಾಗಬಹುದು.








