ತುಮಕೂರು : ಸಿದ್ದಗಂಗಾ ಮಠದಲ್ಲಿ ನಾಳೆ (ಏಪ್ರಿಲ್ 1) ಶ್ರೀ ಶಿವಕುಮಾರ ಸ್ವಾಮೀಜಿ ಅವರ 119ನೇ ಜನ್ಮ ಜಯಂತಿ ಕಾರ್ಯಕ್ರಮ ನಡೆಯಲಿದ್ದು, ರಾಷ್ಟ್ರಪತಿಗಳು ಪಾಲ್ಗೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ 1,500 ಪೊಲೀಸ್ ಸಿಬ್ಬಂದಿಯೊಂದಿಗೆ ಕಟ್ಟುನಿಟ್ಟಿನ ಬಂದೋಬಸ್ತ್ ಮಾಡಲಾಗಿದೆ.
ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಹೆಲಿಕಾಪ್ಟರ್ ಬೆಳಿಗ್ಗೆ ಇಲ್ಲಿನ ಹೆಲಿಪ್ಯಾಡ್ನಲ್ಲಿ ಲ್ಯಾಂಡ್ ಆಗಲಿದೆ. ಅಲ್ಲಿಂದ ಸಿದ್ದಗಂಗಾ ಮಠಕ್ಕೆ ಹೊರಟು ಕಾರ್ಯಕ್ರಮ ಮುಗಿಸಿ ಬಂದಿರುವ ಹೆಲಿಕಾಪ್ಟರ್ನಲ್ಲೇ ಅವರು ವಾಪಸ್ ತೆರಳಲಿದ್ದಾರೆ ಎಂದರು.
ಬೆಳಗ್ಗೆ 10ರಿಂದ 11 ಗಂಟೆಯವರೆಗೆ ಹಾಗೂ 11:30ರಿಂದ 12:30 ಯವರೆಗೆ ಸಂಚಾರ ನಿರ್ಬಂಧಗಳಿರುತ್ತವೆ. ಈ ಸಮಯದಲ್ಲಿ ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಬೇಕು. ಬಿ.ಹೆಚ್. ರೋಡ್ ಮತ್ತು ಬಟ್ವಾಡಿಯಿಂದ ಎನ್ಹೆಚ್ ಫೋರ್ ಸರ್ಕಲ್ತನಕ ಎನ್ಹೆಚ್ ರೋಡ್, ಶಿರಾ ರೋಡ್ ಮತ್ತು ಸಿದ್ದಗಂಗಾ ಮಠದ ಆವರಣದಲ್ಲಿ ಬಂದೋಬಸ್ತ್ ಇರುತ್ತದೆ. ಸಾರ್ವಜನಿಕರು ನಾವು ಹೇಳಿರುವ ಸಮಯದಲ್ಲಿ ಪೊಲೀಸರೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.








