ನವದೆಹಲಿ: ಗುತ್ತಿಗೆ ಆಧಾರಿತ ಅಥವಾ ತಾತ್ಕಾಲಿಕ ನೌಕರರಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇಂದು ಅತ್ಯಂತ ಮಹತ್ವದ ತೀರ್ಪನ್ನು ನೀಡಿದೆ. ಯಾವುದೇ ಸಂಸ್ಥೆಯಲ್ಲಿ ಒಬ್ಬ ವ್ಯಕ್ತಿಯ ಸೇವೆಯನ್ನು ದೀರ್ಘಕಾಲದವರೆಗೆ ಬಳಸಿಕೊಂಡರೆ, ಅಂತಹ ಹುದ್ದೆಯನ್ನು ‘ಕಾಯಂ’ ಎಂದು ಪರಿಗಣಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ಖಾಯಂ ಹುದ್ದೆಯ ಮಾನ್ಯತೆ
ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳು ನೌಕರರನ್ನು ದಶಕಗಳ ಕಾಲ ಗುತ್ತಿಗೆ ಆಧಾರದ ಮೇಲೆ ಇರಿಸಿಕೊಂಡು, ನಂತರ ಅವರನ್ನು ಕಾಯಂ ಮಾಡದೆ ಇರುವುದು ಸರಿಯಲ್ಲ. ದೀರ್ಘಾವಧಿಯ ಅವಿರತ ಸೇವೆಯು ಆ ಹುದ್ದೆಯ ಅಗತ್ಯತೆಯನ್ನು ಸಾಬೀತುಪಡಿಸುತ್ತದೆ.
ಸಮಾನ ಕೆಲಸಕ್ಕೆ ಸಮಾನ ವೇತನ
ದೀರ್ಘಕಾಲದವರೆಗೆ ಕೆಲಸ ಮಾಡುವ ನೌಕರರಿಗೆ ಕಾಯಂ ನೌಕರರಿಗೆ ಸಿಗುವ ಸೌಲಭ್ಯಗಳು ಮತ್ತು ಭದ್ರತೆಯನ್ನು ಒದಗಿಸುವುದು ಸಂಸ್ಥೆಗಳ ಜವಾಬ್ದಾರಿಯಾಗಿದೆ.ಕೇವಲ ‘ಗುತ್ತಿಗೆ’ ಎಂಬ ಕಾರಣ ನೀಡಿ ನೌಕರರನ್ನು ವರ್ಷಾನುಗಟ್ಟಲೆ ಅನಿಶ್ಚಿತತೆಯಲ್ಲಿ ಇಡುವುದು ಕಾರ್ಮಿಕ ನೀತಿಗಳಿಗೆ ವಿರುದ್ಧವಾದುದು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ನೌಕರರಿಗೆ ವರದಾನ:
ಈ ತೀರ್ಪು ಭಾರತದಾದ್ಯಂತ ವಿವಿಧ ಇಲಾಖೆಗಳಲ್ಲಿ ಗುತ್ತಿಗೆ ಮತ್ತು ದಿನಗೂಲಿ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಲಕ್ಷಾಂತರ ನೌಕರರಿಗೆ ಆಶಾದಾಯಕವಾಗಿದೆ. ವಿಶೇಷವಾಗಿ ಹತ್ತಾರು ವರ್ಷಗಳಿಂದ ಸೇವೆಯಲ್ಲಿದ್ದರೂ ಕಾಯಂ ಸೌಲಭ್ಯಗಳಿಂದ ವಂಚಿತರಾದವರಿಗೆ ಇದು ಕಾನೂನಾತ್ಮಕ ಬಲ ನೀಡಲಿದೆ.
ಸೇವೆಯು ದೀರ್ಘಕಾಲದವರೆಗೆ ಮುಂದುವರಿದಿದೆ ಎಂದರೆ ಆ ಹುದ್ದೆಯು ಕಾಯಂ ಸ್ವರೂಪದ್ದಾಗಿದೆ ಎಂದೇ ಅರ್ಥ. ಅಂತಹ ಸಂದರ್ಭದಲ್ಲಿ ನೌಕರನಿಗೆ ಕಾಯಂ ಸ್ಥಾನಮಾನ ನೀಡುವುದು ನ್ಯಾಯಸಮ್ಮತ,” ಎಂದು ನ್ಯಾಯಪೀಠವು ಈ ಸಂದರ್ಭದಲ್ಲಿ ತಿಳಿಸಿದೆ.








