ನವದೆಹಲಿ: ನಾಳೆಯಿಂದ (ಏಪ್ರಿಲ್ 1) ದೇಶಾದ್ಯಂತ ಹಲವು ಪ್ರಮುಖ ಬದಲಾವಣೆಗಳು ಜಾರಿಗೆ ಬರಲಿವೆ. ಈ ಪೈಕಿ ಚಿನ್ನದ ಮೇಲಿನ ಹೂಡಿಕೆಗೆ ಸಂಬಂಧಿಸಿದ ನಿಯಮವೂ ಬದಲಾಗಲಿದ್ದು, ವಿಶೇಷವಾಗಿ ಡಿಜಿಟಲ್ ಗೋಲ್ಡ್ ಅಥವಾ ಸಾವರಿನ್ ಗೋಲ್ಡ್ ಬಾಂಡ್ (SGB) ಮೂಲಕ ಹೂಡಿಕೆ ಮಾಡುವವರ ಜೇಬಿಗೆ ಇದು ಕತ್ತರಿ ಹಾಕಲಿದೆ.
ಏನೇನು ಬದಲಾಗಲಿದೆ?
ಕೇಂದ್ರ ಸರ್ಕಾರವು ಏಪ್ರಿಲ್ 1 ರಿಂದ ಸಾವರಿನ್ ಗೋಲ್ಡ್ ಬಾಂಡ್ (SGB) ಮೇಲೂ ತೆರಿಗೆ ವಿಧಿಸಲು ನಿರ್ಧರಿಸಿದೆ. ಆದರೆ, ಈ ತೆರಿಗೆಯು ಎಲ್ಲಾ ಹೂಡಿಕೆದಾರರಿಗೆ ಅನ್ವಯಿಸುವುದಿಲ್ಲ. ಲಭ್ಯವಿರುವ ಮಾಹಿತಿಯ ಪ್ರಕಾರ, ಯಾರು ಎಸ್ಜಿಬಿಗಳನ್ನು ಆರಂಭಿಕ ವಿತರಣೆಯ ಸಮಯದಲ್ಲಿ (Primary issue) ಖರೀದಿಸದೆ, ನಂತರದ ದಿನಗಳಲ್ಲಿ ಮಾರುಕಟ್ಟೆಯಿಂದ ಖರೀದಿಸಿದ್ದಾರೋ ಅಂತಹವರು ಮಾತ್ರ ಈ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಬಾಂಡ್ ವಿತರಿಸಿದ ಆರಂಭದಿಂದಲೇ ಅದನ್ನು ಹೊಂದಿರುವವರಿಗೆ ಈ ತೆರಿಗೆಯಿಂದ ವಿನಾಯಿತಿ ಇರಲಿದೆ.
ತೆರಿಗೆ ಪ್ರಮಾಣ ಎಷ್ಟು?
ಈ ಹೊಸ ನಿಯಮದಡಿ ಕ್ಯಾಪಿಟಲ್ ಗೇನ್ ಟ್ಯಾಕ್ಸ್ (Capital Gain Tax) ಅನ್ವಯವಾಗಲಿದೆ.
ಇದರಲ್ಲಿ ಅಲ್ಪಾವಧಿ (Short Term) ಮತ್ತು ದೀರ್ಘಾವಧಿಯ (Long Term) ಲಾಭದ ಆಧಾರದ ಮೇಲೆ ತೆರಿಗೆಯನ್ನು ಲೆಕ್ಕ ಹಾಕಲಾಗುತ್ತದೆ.
ಪ್ರಸ್ತುತ ಬೆಳ್ಳಿ ಅಥವಾ ಚಿನ್ನದ ಇಟಿಎಫ್ (ETF) ಖರೀದಿಸುವಾಗ ಯಾವ ರೀತಿ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಪಾವತಿಸುತ್ತೇವೆಯೋ, ಅದೇ ನಿಯಮ ಈಗ ಎಸ್ಜಿಬಿಗೂ ಅನ್ವಯವಾಗಲಿದೆ.







