ಕೊಪ್ಪಳ: ಕೊಪ್ಪಳದ ಇತಿಹಾಸ ಪ್ರಸಿದ್ಧ ಗವಿಮಠದಲ್ಲಿ ಯುಗಾದಿ ಪಾಡ್ಯದ ಅಂಗವಾಗಿ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳ ಸಮ್ಮುಖದಲ್ಲಿ ಪಂಚಾಂಗ ಶ್ರವಣ ಕಾರ್ಯಕ್ರಮ ಜರುಗಿತು. ಶ್ರೀ ಸಂಸ್ಥಾನ ಗವಿಮಠದ ಜ್ಯೋತಿಷಿಗಳಾದ ಪ.ಪೂ. ರುದ್ರಯ್ಯಸ್ವಾಮಿ ವಿ. ಚೆನ್ನವಡೆಯರ ಮಠ ಅವರು ಈ ವರ್ಷದ ಪಂಚಾಂಗದ ಫಲಗಳನ್ನು ಸಾರ್ವಜನಿಕರಿಗೆ ವಿವರಿಸಿದರು.
ಮಳೆ ಮತ್ತು ಬೆಳೆಯ ಮುನ್ಸೂಚನೆ
ಪಂಚಾಂಗದ ಪ್ರಕಾರ, ಈ ವರ್ಷ ಭಾರತದಾದ್ಯಂತ ಮೇಘರಾಜನು ಸಮೃದ್ಧವಾಗಿ ಮಳೆ ಸುರಿಸಲಿದ್ದಾನೆ. ಹಿಮಾಚಲ ಪ್ರದೇಶದಿಂದ ಗಂಗಾನದಿಯವರೆಗೆ ಹಾಗೂ ವಿಂಧ್ಯ ಪರ್ವತ ಶ್ರೇಣಿಗಳಲ್ಲಿ ಸಾಧಾರಣ ಮಳೆಯಾಗಲಿದೆ. ಕರ್ನಾಟಕ, ಆಂಧ್ರಪ್ರದೇಶ, ಕೇರಳ, ತಮಿಳುನಾಡು, ದೆಹಲಿ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ಅತಿವೃಷ್ಟಿ ಸಂಭವಿಸುವ ಸಾಧ್ಯತೆ ಇದೆ.
ಕೃಷಿ ಸಮೃದ್ಧಿ: ಮಳೆ ಉತ್ತಮವಾಗಿರುವುದರಿಂದ ಕೆರೆ, ಕಟ್ಟೆ, ಬಾವಿಗಳು ತುಂಬಿ ತುಳುಕಲಿವೆ. ಜೋಳ, ಗೋಧಿ, ಮೆಕ್ಕೆಜೋಳ, ಭತ್ತ, ರಾಗಿ, ಸಜ್ಜೆ, ಕಡಲೆ, ತೊಗರಿ, ಹೆಸರು ಸೇರಿದಂತೆ ಎಲ್ಲಾ ಬೆಳೆಗಳು ಸಮೃದ್ಧವಾಗಿ ಬರಲಿವೆ. ಹತ್ತಿ ಮತ್ತು ಎಣ್ಣೆಕಾಳುಗಳ ಇಳುವರಿಯೂ ಚೆನ್ನಾಗಿರಲಿದೆ.
ನೈಸರ್ಗಿಕ ವಿಕೋಪ: ಅತಿವೃಷ್ಟಿಯ ಕಾರಣದಿಂದ ಭೂಕುಸಿತ ಮತ್ತು ಗುಡ್ಡ ಕುಸಿತದಂತಹ ಘಟನೆಗಳು ಸಂಭವಿಸಬಹುದು. ಬಿಸಿಲಿನ ತಾಪಮಾನವೂ ಹೆಚ್ಚಾಗಲಿದ್ದು, ಜನರು ಜಾಗರೂಕತೆಯಿಂದ ಇರಬೇಕು.ಈ ವರ್ಷದ ಸೇನಾಧಿಪತಿಯು ಚಂದ್ರನಾಗಿರುವುದರಿಂದ ದೇಶದ ಸೇನೆಯು ವ್ಯವಸ್ಥಿತವಾಗಿರುತ್ತದೆ. ಮಿಲಿಟರಿ ಶಕ್ತಿಯು ಹೆಚ್ಚಲಿದ್ದು, ದೇಶದ ರಕ್ಷಣಾ ಕಾರ್ಯವು ಬಲಗೊಳ್ಳಲಿದೆ. ಉದ್ದು, ಹುರುಳಿ, ನವಣೆ, ಸಾಸಿವೆ ಮತ್ತು ಎಳ್ಳಿನ ಬೆಲೆಗಳಲ್ಲಿ ಏರಿಕೆ ಕಂಡುಬರಲಿದೆ. ಮಧ್ಯಂತರದಲ್ಲಿ ಬೆಳೆಗಳ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ. ಈ ಸಂವತ್ಸರದ ಹೊಸ ಮಳೆಯು ದಿನಾಂಕ 14-04-2026 ರಂದು ಮಂಗಳವಾರ ಅಶ್ವಿನಿ ಮಳೆಯೊಂದಿಗೆ ಪ್ರಾರಂಭವಾಗಲಿದೆ. ಅಲ್ಲದೆ, ಈ ವರ್ಷ ಜ್ಯೇಷ್ಠ ಮಾಸವು ಅಧಿಕ ಮಾಸವಾಗಿರಲಿದೆ ಎಂದು ಪಂಚಾಂಗದಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಗಣ್ಯರಾದ ಸಿದ್ಧಣ್ಣ ನಾಲ್ವಡಿ, ಪ್ರಭು ಹೆಬ್ಬಾಳ, ಗವಿಸಿದ್ಧಪ್ಪ ಕೊಪ್ಪಳ, ಪರಮೇಶ್ವರಪ್ಪ ಕೊಪ್ಪಳ, ಸಂಜಯ್ ಕೋಟ್ನಾಳ ಸೇರಿದಂತೆ ಅನೇಕ ಭಕ್ತರು ಉಪಸ್ಥಿತರಿದ್ದರು.








