ಮೈಸೂರು: ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ನಂಜನಗೂಡಿನ ಶ್ರೀ ನಂಜುಂದೇಶ್ವರ ಸ್ವಾಮಿಯ ಪಂಚಮಹಾರಥೋತ್ಸವದ ಸಂಭ್ರಮದ ನಡುವೆ ಭೀಕರ ದುರಂತವೊಂದು ಸಂಭವಿಸಿದೆ. ರಥೋತ್ಸವದ ವೇಳೆ ಉಂಟಾದ ವಿಪರೀತ ನೂಕುನುಗ್ಗಲು ಹಾಗೂ ಕಾಲ್ತುಳಿತದಿಂದಾಗಿ ಓರ್ವ ಭಕ್ತ ಮೃತಪಟ್ಟಿದ್ದು, ತಂದೆ ಮತ್ತು ಮಗ ಗಂಭೀರವಾಗಿ ಗಾಯಗೊಂಡಿದ್ದಾರೆ.
ಘಟನೆಯ ವಿವರ: ದಕ್ಷಿಣ ಕಾಶಿ ಎಂದೇ ಪ್ರಖ್ಯಾತವಾಗಿರುವ ನಂಜನಗೂಡಿನಲ್ಲಿ ಇಂದು ಬೆಳಿಗ್ಗೆ ಪಂಚಮಹಾರಥೋತ್ಸವ ಸಡಗರದಿಂದ ಆರಂಭವಾಗಿತ್ತು. ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ರಥೋತ್ಸವಕ್ಕೆ ಚಾಲನೆ ನೀಡಿದ್ದರು. ವರ್ಷಕ್ಕೊಮ್ಮೆ ನಡೆಯುವ ಈ ಮಹೋತ್ಸವವನ್ನು ಕಣ್ಣಾರೆ ವೀಕ್ಷಿಸಲು ರಾಜ್ಯದ ಮೂಲೆ ಮೂಲೆಗಳಿಂದ ಸಾಗರೋಪಾದಿಯಲ್ಲಿ ಭಕ್ತ ಸಾಗರ ಹರಿದುಬಂದಿತ್ತು.
ದುರಂತ ಸಂಭವಿಸಿದ್ದು ಹೇಗೆ? ರಥಬೀದಿಯಲ್ಲಿ ರಥಗಳು ಸಾಗುತ್ತಿದ್ದ ವೇಳೆ ಭಕ್ತರ ಸಂಖ್ಯೆ ಮಿತಿ ಮೀರಿದ್ದರಿಂದ ನಿಯಂತ್ರಣ ತಪ್ಪಿ ಭಾರಿ ನೂಕುನುಗ್ಗಲು ಉಂಟಾಗಿದೆ. ಈ ವೇಳೆ ಜನದಟ್ಟಣೆಯ ಮಧ್ಯೆ ಸಿಲುಕಿ ಕಾಲ್ತುಳಿತ ಸಂಭವಿಸಿದೆ. ಘಟನೆಯಲ್ಲಿ 56 ವರ್ಷದ ನಂಜುಂಡಸ್ವಾಮಿ ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಗಾಯಾಳುಗಳ ಸ್ಥಿತಿ: ಕಾಲ್ತುಳಿತಕ್ಕೆ ಸಿಲುಕಿದ ತಂದೆ ರಂಗಸ್ವಾಮಿ ಮತ್ತು ಮಗ ಅಪ್ಪು ಎಂಬುವವರು ತೀವ್ರವಾಗಿ ಗಾಯಗೊಂಡಿದ್ದಾರೆ. ರಂಗಸ್ವಾಮಿ ಅವರ ಸ್ಥಿತಿ ಗಂಭೀರವಾಗಿದ್ದು, ಮಗ ಅಪ್ಪು ಅವರ ಕಾಲು ಮುರಿದಿದೆ ಎಂದು ತಿಳಿದುಬಂದಿದೆ. ಇಬ್ಬರನ್ನೂ ತಕ್ಷಣವೇ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಪೊಲೀಸರ ಹರಸಾಹಸ: ಲಕ್ಷಾಂತರ ಸಂಖ್ಯೆಯಲ್ಲಿ ಜಮಾಯಿಸಿದ್ದ ಭಕ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಆದರೂ ಜನಜಂಗುಳಿ ಮಿತಿ ಮೀರಿದ್ದರಿಂದ ಈ ಅನಾಹುತ ಸಂಭವಿಸಿದೆ ಎನ್ನಲಾಗಿದೆ. ಘಟನೆಯಿಂದಾಗಿ ರಥೋತ್ಸವದ ಸಂಭ್ರಮದ ನಡುವೆ ವಿಷಾದದ ಛಾಯೆ ಆವರಿಸಿದೆ.
ಹೋಮ್ ಲೋನ್ EMI ಮಿಸ್ ಆಗಿದೆಯೇ? ದಂಡ, ಸಿಬಿಲ್ ಸ್ಕೋರ್ ಮೇಲಾಗುವ ಪರಿಣಾಮಗಳೇನು? ಇಲ್ಲಿದೆ ಓದಿ
BIG NEWS: ರಾಜ್ಯದಲ್ಲೊಂದು ಧಾರುಣ ಘಟನೆ: ಹಾಲುಣಿಸಿದ ಕೆಲವೇ ಕ್ಷಣದಲ್ಲೇ ಹಸುಗೂಸಿನ ತಾಯಿ ಸಾವು








