ನವದೆಹಲಿ: ದೆಹಲಿ ಮೆಟ್ರೋ ನಿಲ್ದಾಣಗಳಲ್ಲಿ ದೇಶವಿರೋಧಿ ಪೋಸ್ಟರ್‌ಗಳನ್ನು ಅಂಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ವಿಶೇಷ ಘಟಕವು (Special Cell) ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಲಷ್ಕರ್-ಎ-ತೈಬಾ (LeT) ಸಂಘಟನೆಯ ಭಯೋತ್ಪಾದಕ ಶಬೀರ್ ಅಹ್ಮದ್ ಲೋನ್‌ನನ್ನು ಬಂಧಿಸಿದೆ. ಈತ ಇತ್ತೀಚೆಗೆ ಬಯಲಾದ ಲಷ್ಕರ್ ಭಯೋತ್ಪಾದಕ ಮಾಡ್ಯೂಲ್‌ನ ಪ್ರಮುಖ ಸಂಚುಕೋರ (Handler) ಎಂದು ಗುರುತಿಸಲಾಗಿದೆ.
ಕಳೆದ ಫೆಬ್ರವರಿ ತಿಂಗಳಲ್ಲಿ ದೆಹಲಿಯ ಜನಪಥ್ ಮತ್ತು ಕಾಶ್ಮೀರಿ ಗೇಟ್ ಸೇರಿದಂತೆ ಹಲವು ಮೆಟ್ರೋ ನಿಲ್ದಾಣಗಳ ಗೋಡೆಗಳ ಮೇಲೆ ಬುರ್ಹಾನ್ ವಾನಿ ಪರ ಮತ್ತು ದೇಶವಿರೋಧಿ ಪೋಸ್ಟರ್‌ಗಳನ್ನು ಅಂಟಿಸಲಾಗಿತ್ತು. ಇದು ರಾಷ್ಟ್ರ ರಾಜಧಾನಿಯಲ್ಲಿ ಭಾರೀ ಆತಂಕ ಮೂಡಿಸಿತ್ತು.
ಕಾಶ್ಮೀರ ಮೂಲದ ಶಬೀರ್ ಅಹ್ಮದ್ ಲೋನ್, ಈ ಹಿಂದೆ ಭಯೋತ್ಪಾದನಾ ಚಟುವಟಿಕೆಗಾಗಿ ಜೈಲು ಶಿಕ್ಷೆ ಅನುಭವಿಸಿ 2019 ರಲ್ಲಿ ಬಿಡುಗಡೆಯಾಗಿದ್ದ. ಬಳಿಕ ಬಾಂಗ್ಲಾದೇಶಕ್ಕೆ ಪರಾರಿಯಾಗಿದ್ದ ಈತ, ಅಲ್ಲಿಂದಲೇ ಭಾರತದಲ್ಲಿ ವಿಧ್ವಂಸಕ ಕೃತ್ಯಗಳಿಗೆ ಸಂಚು ರೂಪಿಸುತ್ತಿದ್ದ ಎನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಎಂಟು ಜನರನ್ನು ಬಂಧಿಸಿದ್ದರು. ಅವರ ವಿಚಾರಣೆಯ ವೇಳೆ ಶಬೀರ್ ಲೋನ್ ಹೆಸರನ್ನು ಬಹಿರಂಗಪಡಿಸಲಾಗಿತ್ತು. ಈತ ಅಕ್ರಮವಾಗಿ ಭಾರತದಲ್ಲಿ ನೆಲೆಸಿರುವ ಬಾಂಗ್ಲಾದೇಶಿ ಪ್ರಜೆಗಳನ್ನು ನೇಮಿಸಿಕೊಂಡು ಅವರಿಗೆ ತರಬೇತಿ ನೀಡುತ್ತಿದ್ದ ಎಂಬ ಆಘಾತಕಾರಿ ಮಾಹಿತಿ ಲಭ್ಯವಾಗಿದೆ.








