ಕಳೆದ ಹಲವು ತಿಂಗಳುಗಳಿಂದ ಕ್ಯೂಬಾ ಮೇಲೆ ಹೇರಲಾಗಿದ್ದ ಕಠಿಣ ‘ತೈಲ ದಿಗ್ಬಂಧನ’ವನ್ನು ಅಮೆರಿಕದ ಟ್ರಂಪ್ ಸರ್ಕಾರ ಅಚ್ಚರಿ ಎಂಬಂತೆ ಸಡಿಲಗೊಳಿಸಿದೆ. ರಷ್ಯಾದಿಂದ ಕಚ್ಚಾ ತೈಲ ಹೊತ್ತು ಬರುತ್ತಿರುವ ಬೃಹತ್ ನೌಕೆಗೆ ಕ್ಯೂಬಾ ಪ್ರವೇಶಿಸಲು ಅಮೆರಿಕ ಅನುಮತಿ ನೀಡಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
‘ಅನಾಟೋಲಿ ಕೊಲೊಡ್ಕಿನ್’ (Anatoly Kolodkin) ಎಂಬ ಹೆಸರಿನ ರಷ್ಯಾದ ತೈಲ ನೌಕೆಯು ಸುಮಾರು 7,30,000 ಬ್ಯಾರೆಲ್ ಕಚ್ಚಾ ತೈಲದೊಂದಿಗೆ ಕ್ಯೂಬಾದ ಮಟಾನ್ಜಾಸ್ ಬಂದರಿನತ್ತ ಸಾಗುತ್ತಿದೆ. ವಿಶೇಷವೆಂದರೆ, ಈ ನೌಕೆಯ ಮೇಲೆ ಈಗಾಗಲೇ ಅಮೆರಿಕದ ನಿರ್ಬಂಧಗಳಿದ್ದವು. ಆದರೂ, ಅಮೆರಿಕದ ಕೋಸ್ಟ್ ಗಾರ್ಡ್ ಈ ಹಡಗನ್ನು ತಡೆಯದೆ ಕ್ಯೂಬಾ ತಲುಪಲು ದಾರಿ ಮಾಡಿಕೊಟ್ಟಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ಕ್ಯೂಬಾದ ಜನರಿಗೆ ಬದುಕುಳಿಯಲು ಇಂಧನದ ಅಗತ್ಯವಿದೆ. ರಷ್ಯಾ ಆಗಲಿ ಅಥವಾ ಬೇರೆ ಯಾವುದೇ ದೇಶವಾಗಲಿ, ಕ್ಯೂಬಾಗೆ ತೈಲ ಕಳುಹಿಸುವುದರಲ್ಲಿ ನಮಗೆ ಈಗ ಸಮಸ್ಯೆಯಿಲ್ಲ,” ಎಂದು ಹೇಳುವ ಮೂಲಕ ಮಾನವೀಯ ನೆಲಗಟ್ಟಿನಲ್ಲಿ ಈ ನಿರ್ಧಾರ ಕೈಗೊಂಡಿರುವುದಾಗಿ ಸುಳಿವು ನೀಡಿದ್ದಾರೆ.
ಜನವರಿ ತಿಂಗಳಿನಿಂದ ಕ್ಯೂಬಾ ತೀವ್ರ ಇಂಧನ ಬಿಕ್ಕಟ್ಟನ್ನು ಎದುರಿಸುತ್ತಿದೆ. ವೆನೆಜುವೆಲಾದಿಂದ ಬರುತ್ತಿದ್ದ ತೈಲ ಸ್ಥಗಿತಗೊಂಡ ನಂತರ, ಅಲ್ಲಿ ದಿನಕ್ಕೆ ಹಲವು ಗಂಟೆಗಳ ಕಾಲ ವಿದ್ಯುತ್ ಕಡಿತ ಮತ್ತು ಪೆಟ್ರೋಲ್-ಡೀಸೆಲ್ ಅಭಾವ ಉಂಟಾಗಿತ್ತು. ಈಗ ರಷ್ಯಾದಿಂದ ಬರುತ್ತಿರುವ ಈ ತೈಲವು ಕ್ಯೂಬಾ ದೇಶಕ್ಕೆ ದೊಡ್ಡ ಆಸರೆಯಾಗಲಿದೆ.








