ಕುವೈತ್ ಸಿಟಿ: ಇರಾನ್ ಮತ್ತು ಅಮೆರಿಕ ನಡುವಿನ ಯುದ್ಧವು ಈಗ ಅತಿ ಭೀಕರ ಸ್ವರೂಪ ಪಡೆದುಕೊಂಡಿದೆ. ಕುವೈತ್‌ನ ಪ್ರಮುಖ ವಿದ್ಯುತ್ ಮತ್ತು ಕುಡಿಯುವ ನೀರಿನ ಶುದ್ಧೀಕರಣ ಸ್ಥಾವರದ (Desalination Plant) ಮೇಲೆ ಇರಾನ್ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಭಾರತೀಯ ಮೂಲದ ಕಾರ್ಮಿಕರೊಬ್ಬರು ದುರ್ಮರಣಕ್ಕೀಡಾಗಿದ್ದಾರೆ. ಈ ಘಟನೆಯು ವಿದೇಶದಲ್ಲಿರುವ ಭಾರತೀಯರಲ್ಲಿ ತೀವ್ರ ಆತಂಕ ಮೂಡಿಸಿದೆ.
ಸೋಮವಾರ ಮುಂಜಾನೆ (ಮಾರ್ಚ್ 30, 2026) ಕುವೈತ್‌ನ ವಿದ್ಯುತ್ ಮತ್ತು ಜಲ ಮಂಡಳಿಗೆ ಸೇರಿದ ಸೇವಾ ಕಟ್ಟಡದ ಮೇಲೆ ಇರಾನ್ ಕ್ಷಿಪಣಿ ಅಪ್ಪಳಿಸಿದೆ. ಈ ವೇಳೆ ಕೆಲಸದಲ್ಲಿದ್ದ ಭಾರತೀಯ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಕುವೈತ್ ಸರ್ಕಾರ ಅಧಿಕೃತವಾಗಿ ಖಚಿತಪಡಿಸಿದೆ.ದಾಳಿಯಿಂದಾಗಿ ಕುಡಿಯುವ ನೀರನ್ನು ಪೂರೈಸುವ ಬೃಹತ್ ಸ್ಥಾವರಕ್ಕೆ ತೀವ್ರ ಹಾನಿಯಾಗಿದ್ದು, ಕುವೈತ್‌ನ ಹಲವು ಭಾಗಗಳಲ್ಲಿ ಕುಡಿಯುವ ನೀರು ಮತ್ತು ವಿದ್ಯುತ್ ವ್ಯತ್ಯಯ ಉಂಟಾಗುವ ಭೀತಿ ಎದುರಾಗಿದೆ.
ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿರುವ ಭಾರತೀಯರ ಸುರಕ್ಷತೆಯ ಬಗ್ಗೆ ಭಾರತ ಸರ್ಕಾರ ತೀವ್ರ ನಿಗಾ ವಹಿಸಿದೆ. ಮೃತಪಟ್ಟ ಕಾರ್ಮಿಕನ ವಿವರಗಳನ್ನು ಕಲೆಹಾಕಲಾಗುತ್ತಿದ್ದು, ಮೃತದೇಹವನ್ನು ತಾಯ್ನಾಡಿಗೆ ತರಲು ಪ್ರಯತ್ನಗಳು ಆರಂಭವಾಗಿವೆ.








