ಲೇಹ್ (ಲಡಾಖ್): ಲಡಾಖ್ನ ಲೇಹ್ ಪ್ರಾಂತ್ಯದಲ್ಲಿ ಇಂದು ಬೆಳಿಗ್ಗೆ ಸರಣಿ ಭೂಕಂಪಗಳು ಸಂಭವಿಸಿದ್ದು, ಕೇವಲ ಎರಡು ಗಂಟೆಗಳ ಅಂತರದಲ್ಲಿ ಮೂರು ಬಾರಿ ಭೂಮಿ ಕಂಪಿಸಿದೆ. ಈ ಸರಣಿ ಕಂಪನಗಳಿಂದಾಗಿ ಲೇಹ್ ಮತ್ತು ಸುತ್ತಮುತ್ತಲಿನ ಪ್ರದೇಶದ ಜನರಲ್ಲಿ ತೀವ್ರ ಆತಂಕ ಮನೆಮಾಡಿದೆ.
ರಾಷ್ಟ್ರೀಯ ಭೂಕಂಪನ ಶಾಸ್ತ್ರ ಕೇಂದ್ರದ (NCS) ವರದಿಯ ಪ್ರಕಾರ, ಇಂದು ಬೆಳಿಗ್ಗೆ ಈ ಕೆಳಗಿನಂತೆ ಕಂಪನಗಳು ದಾಖಲಾಗಿವೆ:
ಮೊದಲ ಕಂಪನ: ಬೆಳಿಗ್ಗೆ 8:31ಕ್ಕೆ ರಿಕ್ಟರ್ ಮಾಪಕದಲ್ಲಿ 3.9 ತೀವ್ರತೆಯ ಮೊದಲ ಕಂಪನ ದಾಖಲಾಯಿತು.
ಬೆಳಿಗ್ಗೆ 10:10ಕ್ಕೆ ಸುಮಾರು 4.7 ತೀವ್ರತೆಯ ಪ್ರಬಲ ಕಂಪನ ಸಂಭವಿಸಿತು. ಬೆಳಿಗ್ಗೆ 10:23ರ ಸುಮಾರಿಗೆ 4.8 ತೀವ್ರತೆಯ ಮತ್ತೊಂದು ಕಂಪನ ದಾಖಲಾಗಿದ್ದು, ಇದು ಅತಿ ಹೆಚ್ಚು ತೀವ್ರತೆಯನ್ನು ಹೊಂದಿತ್ತು. ಎಲ್ಲ ಭೂಕಂಪಗಳ ಕೇಂದ್ರಬಿಂದು ಲೇಹ್ನಿಂದ ಉತ್ತರಕ್ಕೆ ಭೂಮಿಯ ಒಳಭಾಗದಲ್ಲಿ 10 ಕಿ.ಮೀ ನಿಂದ 44 ಕಿ.ಮೀ ಆಳದಲ್ಲಿ ದಾಖಲಾಗಿದೆ.
ಸರಣಿ ಕಂಪನಗಳು ಸಂಭವಿಸಿದರೂ ಸಹ, ಸದ್ಯಕ್ಕೆ ಯಾವುದೇ ಪ್ರಾಣಾಪಾಯ ಅಥವಾ ಕಟ್ಟಡಗಳು ಕುಸಿದ ಬಗ್ಗೆ ವರದಿಯಾಗಿಲ್ಲ. ಆದರೆ, ಕೆಲವು ಹಳೆಯ ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಪದೇ ಪದೇ ಭೂಮಿ ಕಂಪಿಸುತ್ತಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಜನರು ತಮ್ಮ ಮನೆ ಮತ್ತು ಕಚೇರಿಗಳಿಂದ ಹೊರಬಂದು ರಸ್ತೆಯಲ್ಲೇ ನಿಂತಿದ್ದರು.








