ಕ್ಯಾನ್ಸರ್ ಇಂದು ವಿಶ್ವದಾದ್ಯಂತ ಸಾವುಗಳಿಗೆ ಎರಡನೇ ಪ್ರಮುಖ ಕಾರಣವಾಗಿದೆ. ಅದರಲ್ಲೂ ಶ್ವಾಸಕೋಶದ ಕ್ಯಾನ್ಸರ್ ಪುರುಷರು ಮತ್ತು ಮಹಿಳೆಯರಿಬ್ಬರನ್ನೂ ಸಮಾನವಾಗಿ ಕಾಡುವ ಮಾರಕ ಕಾಯಿಲೆಯಾಗಿದೆ. ಆರಂಭಿಕ ಹಂತದಲ್ಲಿ ಇದರ ಲಕ್ಷಣಗಳು ಸ್ಪಷ್ಟವಾಗಿ ತಿಳಿಯುವುದಿಲ್ಲವಾದ್ದರಿಂದ ಇದನ್ನು ‘ಸೈಲೆಂಟ್ ಕಿಲ್ಲರ್’ ಎಂದೂ ಕರೆಯಲಾಗುತ್ತದೆ. ಆದರೆ, ತಜ್ಞರ ಪ್ರಕಾರ ಮುಂಜಾನೆ ನಿದ್ರೆಯಿಂದ ಎದ್ದಾಗ ಕೆಲವು ನಿರ್ದಿಷ್ಟ ಬದಲಾವಣೆಗಳನ್ನು ಗಮನಿಸಿದರೆ ಈ ಕಾಯಿಲೆಯನ್ನು ಮೊದಲೇ ಪತ್ತೆಹಚ್ಚಲು ಸಾಧ್ಯವಿದೆ.
ಮುಂಜಾನೆ ಕಾಣಿಸಿಕೊಳ್ಳುವ ಪ್ರಮುಖ 4 ಎಚ್ಚರಿಕೆ ಲಕ್ಷಣಗಳು ಇಲ್ಲಿವೆ:
1. ಮುಂಜಾನೆ ಕಾಣಿಸಿಕೊಳ್ಳುವ ಜ್ವರ:
ಅಮೆರಿಕದ ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ಪ್ರಕಾರ, ಶ್ವಾಸಕೋಶದ ಕ್ಯಾನ್ಸರ್ ಇರುವ ರೋಗಿಗಳು ಹೆಚ್ಚಾಗಿ ಬೆಳಿಗ್ಗೆ ಎದ್ದಾಗ ಜ್ವರದಿಂದ ಕೂಡಿರುತ್ತಾರೆ. ಸಾಮಾನ್ಯವಾಗಿ ದೇಹದಲ್ಲಿ ಇನ್ಫೆಕ್ಷನ್ ಆದಾಗ ಜ್ವರ ಬರುತ್ತದೆ, ಆದರೆ ಯಾವುದೇ ಕಾರಣವಿಲ್ಲದೆ ಸತತವಾಗಿ ಮುಂಜಾನೆ ಜ್ವರ ಕಾಣಿಸಿಕೊಳ್ಳುತ್ತಿದ್ದರೆ ಅದು ಕ್ಯಾನ್ಸರ್ನ ಸಂಕೇತವಾಗಿರಬಹುದು.
2. ಅತಿಯಾದ ಬೆವರು:
ರಾತ್ರಿ ಮಲಗಿದ್ದಾಗ ಅತಿಯಾಗಿ ಬೆವರುವುದು ಮತ್ತು ಬೆಳಿಗ್ಗೆ ಎದ್ದ ತಕ್ಷಣ ಮೈಯೆಲ್ಲಾ ಬೆವರಿನಿಂದ ಒದ್ದೆಯಾಗುವುದು ಶ್ವಾಸಕೋಶದ ಕ್ಯಾನ್ಸರ್ನ ಒಂದು ಲಕ್ಷಣ. ದೇಹವು ತನ್ನನ್ನು ತಾನು ತಂಪಾಗಿಸಿಕೊಳ್ಳಲು ಪ್ರಯತ್ನಿಸುವಾಗ ಈ ರೀತಿ ಅತಿಯಾದ ಬೆವರು ಉಂಟಾಗುತ್ತದೆ.
3. ನಿರಂತರ ಒಣ ಕೆಮ್ಮು:
ಸತತವಾಗಿ 3 ವಾರಗಳಿಗಿಂತ ಹೆಚ್ಚು ಕಾಲ ಒಣ ಕೆಮ್ಮು (ಕಫವಿಲ್ಲದ ಕೆಮ್ಮು) ಕಾಡುತ್ತಿದ್ದರೆ ಅದನ್ನು ನಿರ್ಲಕ್ಷಿಸಬೇಡಿ. ಶ್ವಾಸಕೋಶದ ಕ್ಯಾನ್ಸರ್ ಪೀಡಿತರಲ್ಲಿ ಸುಮಾರು ಶೇ. 65 ರಷ್ಟು ಮಂದಿಗೆ ಇಂತಹ ಒಣ ಕೆಮ್ಮು ಕಾಣಿಸಿಕೊಳ್ಳುತ್ತದೆ ಎಂದು ಸಂಶೋಧನೆಗಳು ತಿಳಿಸಿವೆ.
4. ಕಫದಲ್ಲಿ ರಕ್ತದ ಅಂಶ:
ಕೆಮ್ಮಿದಾಗ ಗಟ್ಟಿಯಾದ ಕಫ ಬರುವುದು ಮತ್ತು ಅದರಲ್ಲಿ ರಕ್ತದ ಕಲೆಗಳು ಕಂಡುಬರುವುದು ಅತ್ಯಂತ ಅಪಾಯಕಾರಿ ಲಕ್ಷಣವಾಗಿದೆ. ಇದು ಕ್ಯಾನ್ಸರ್ ಜೀವಕೋಶಗಳು ಶ್ವಾಸಕೋಶದಲ್ಲಿ ಹರಡುತ್ತಿವೆ ಎಂಬುದರ ಸೂಚನೆಯಾಗಿರಬಹುದು.
ಸೂಚನೆ: ಮೇಲೆ ತಿಳಿಸಿದ ಲಕ್ಷಣಗಳು ಕಂಡುಬಂದ ತಕ್ಷಣ ಗಾಬರಿಯಾಗುವ ಅಗತ್ಯವಿಲ್ಲ, ಆದರೆ ಇವುಗಳಲ್ಲಿ ಯಾವುದಾದರೂ ಲಕ್ಷಣಗಳು ಸತತವಾಗಿ ಕಾಣಿಸಿಕೊಳ್ಳುತ್ತಿದ್ದರೆ ವಿಳಂಬ ಮಾಡದೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ.








