ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯಿಂದಾಗಿ ವಿಶ್ವದ ಹಲವು ರಾಷ್ಟ್ರಗಳಲ್ಲಿ ಇಂಧನ ತುರ್ತುಪರಿಸ್ಥಿತಿ ಅಥವಾ ‘ಎನರ್ಜಿ ಲಾಕ್ಡೌನ್’ ಭೀತಿ ಎದುರಾಗಿದೆ. ಈಗಾಗಲೇ ಆಗ್ನೇಯ ಏಷ್ಯಾದ ರಾಷ್ಟ್ರವಾದ ಫಿಲಿಪೈನ್ಸ್ ತನ್ನ ದೇಶದಲ್ಲಿ ‘ರಾಷ್ಟ್ರೀಯ ಇಂಧನ ತುರ್ತುಪರಿಸ್ಥಿತಿ’ ಘೋಷಿಸಿದೆ. 2020ರ ಕೋವಿಡ್ ಬಿಕ್ಕಟ್ಟಿನ ನಂತರ ಆ ದೇಶ ಘೋಷಿಸಿರುವ ಮೊದಲ ರಾಷ್ಟ್ರವ್ಯಾಪಿ ತುರ್ತುಪರಿಸ್ಥಿತಿ ಇದಾಗಿದೆ.
ಎನರ್ಜಿ ಲಾಕ್ಡೌನ್ ಎಂದರೆ ಏನು?
ಒಂದು ದೇಶದ ಇಂಧನ ಪೂರೈಕೆಯ ಮೇಲೆ (ತೈಲ, ಅನಿಲ ಅಥವಾ ವಿದ್ಯುತ್) ಹಠಾತ್ ದೊಡ್ಡ ಸಂಕಷ್ಟ ಎದುರಾದಾಗ ಅಥವಾ ಪೂರೈಕೆ ಸಂಪೂರ್ಣವಾಗಿ ಸ್ಥಗಿತಗೊಂಡಾಗ ಈ ಪದವನ್ನು ಬಳಸಲಾಗುತ್ತದೆ. ಸರಳವಾಗಿ ಹೇಳುವುದಾದರೆ, ದೇಶಕ್ಕೆ ಅಗತ್ಯವಿರುವ ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಸರಿಯಾಗಿ ಲಭ್ಯವಾಗದ ಸ್ಥಿತಿಯೇ ಈ ಇಂಧನ ಲಾಕ್ಡೌನ್.
ಇದು ಯಾವಾಗ ಸಂಭವಿಸುತ್ತದೆ?
ಯುದ್ಧ ಮತ್ತು ಉದ್ವಿಗ್ನತೆ: ಎರಡು ದೇಶಗಳ ನಡುವೆ ಯುದ್ಧ ನಡೆದಾಗ ತೈಲ ಪೂರೈಕೆಯ ಮಾರ್ಗಗಳು ಬಂದ್ ಆಗುತ್ತವೆ.
ಸಪ್ಲೈ ಚೈನ್ ಕಡಿತ: ಪೂರೈಕೆ ಸರಪಳಿ ತುಂಡಾದಾಗ ಬೇಡಿಕೆ ಮತ್ತು ಪೂರೈಕೆಯ ನಡುವೆ ದೊಡ್ಡ ವ್ಯತ್ಯಾಸ ಉಂಟಾಗುತ್ತದೆ.
ಬೆಲೆ ಏರಿಕೆ: ತೈಲ ಲಭ್ಯತೆ ಕಡಿಮೆಯಾದಂತೆ ಪೆಟ್ರೋಲ್-ಡೀಸೆಲ್ ಬೆಲೆ ಗಗನಕ್ಕೇರುತ್ತದೆ, ಇದು ನೇರವಾಗಿ ಹಣದುಬ್ಬರಕ್ಕೆ ಕಾರಣವಾಗುತ್ತದೆ.
ಉದ್ಯಮಗಳ ಮೇಲೆ ಪರಿಣಾಮ: ವಿದ್ಯುತ್ ಉತ್ಪಾದನೆ ಮತ್ತು ಕೈಗಾರಿಕೆಗಳು ಸ್ಥಗಿತಗೊಂಡು ಸಾಮಾನ್ಯ ಜನರ ಜೀವನ ಅಸ್ತವ್ಯಸ್ತಗೊಳ್ಳುತ್ತದೆ.
ಭಾರತಕ್ಕೆ ಇರುವ ಅಪಾಯವೇನು?
ಭಾರತವು ತನ್ನ ಇಂಧನ ಅಗತ್ಯದ ಸುಮಾರು 90% ರಷ್ಟು ತೈಲವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಹೀಗಾಗಿ ಮಧ್ಯಪ್ರಾಚ್ಯದ ಬಿಕ್ಕಟ್ಟು ಭಾರತದ ಮೇಲೆ ನೇರ ಪರಿಣಾಮ ಬೀರಲಿದೆ.
ಹಾರ್ಮುಜ್ ಜಲಸಂಧಿಯ ಆತಂಕ: ವಿಶ್ವದ ಒಟ್ಟು ಕಚ್ಚಾ ತೈಲದ ಸುಮಾರು 20% ರಷ್ಟು ಪಾಲು ಇದೇ ಮಾರ್ಗವಾಗಿ ಸಾಗುತ್ತದೆ. ಇಲ್ಲಿ ಹಡಗುಗಳ ಸಂಚಾರಕ್ಕೆ ಅಡ್ಡಿಯಾದರೆ ತೈಲ ಬೆಲೆ ವಿಪರೀತ ಏರಿಕೆಯಾಗುತ್ತದೆ.
ಕಡಿಮೆ ದಾಸ್ತಾನು: ಸದ್ಯ ಭಾರತದ ಬಳಿ ಕೇವಲ 9.5 ದಿನಗಳಿಗೆ ಆಗುವಷ್ಟು ಮಾತ್ರ ಕಾರ್ಯತಂತ್ರದ ತೈಲ ಸಂಗ್ರಹವಿದೆ (Strategic Oil Reserves). ಇದು ಅಪಾಯದ ಮಟ್ಟವನ್ನು ಹೆಚ್ಚಿಸಿದೆ.
ಮೋದಿಯವರ ಎಚ್ಚರಿಕೆ: ಇತ್ತೀಚೆಗೆ ಲೋಕಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಪಶ್ಚಿಮ ಏಷ್ಯಾದ ಯುದ್ಧವು ದೊಡ್ಡ ಸವಾಲಾಗಿದೆ ಎಂದು ಬಣ್ಣಿಸಿದ್ದರು. ಕೊರೊನಾದಂತಹ ಸವಾಲುಗಳನ್ನು ಎದುರಿಸಲು ನಾವು ಸಿದ್ಧರಿರಬೇಕು ಎಂದು ದೇಶದ ಜನತೆಗೆ ಕರೆ ನೀಡಿದ್ದಾರೆ.








