ನವದೆಹಲಿ: ಶಾಲಾ-ಕಾಲೇಜುಗಳು ಮತ್ತು ಸರ್ಕಾರಿ ಕಾರ್ಯಕ್ರಮಗಳಲ್ಲಿ ರಾಷ್ಟ್ರಗೀತೆ ‘ವಂದೇ ಮಾತರಂ’ ಹಾಡುವುದನ್ನು ಕಡ್ಡಾಯಗೊಳಿಸಿ ಕೇಂದ್ರ ಗೃಹ ಸಚಿವಾಲಯ ಹೊರಡಿಸಿದ್ದ ಸುತ್ತೋಲೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಈ ಸಂದರ್ಭದಲ್ಲಿ ನ್ಯಾಯಾಲಯವು, “ವಂದೇ ಮಾತರಂ ಹಾಡುವುದು ಕಡ್ಡಾಯವಲ್ಲ” ಎಂದು ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
ಕೇಂದ್ರ ಸರ್ಕಾರದ ಸುತ್ತೋಲೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜಾಯ್ ಮಲ್ಯಾ ಬಾಗ್ಚಿ ಮತ್ತು ವಿಫುಲ್ ಎಂ. ಪಂಚೋಲಿ ಅವರ ಪೀಠವು ವಜಾಗೊಳಿಸಿತು.
ರ್ಕಾರಿ ಕಾರ್ಯಕ್ರಮ ಅಥವಾ ಶಾಲೆಗಳಲ್ಲಿ ವಂದೇ ಮಾತರಂ ಹಾಡಲೇಬೇಕು ಎಂಬ ನಿಯಮವಿಲ್ಲ. ಇದು ಕೇವಲ ಒಂದು ಶಿಷ್ಟಾಚಾರ ಅಥವಾ ಸಲಹೆಯಷ್ಟೇ (Advisory) ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ಶಿಕ್ಷಾರ್ಹ ಅಪರಾಧವಲ್ಲ
ಗೀತೆಯನ್ನು ಹಾಡದಿದ್ದರೆ ಯಾವುದೇ ಕಾನೂನಾತ್ಮಕ ಶಿಕ್ಷೆ ಅಥವಾ ದಂಡ ವಿಧಿಸುವ ಬಗ್ಗೆ ಸುತ್ತೋಲೆಯಲ್ಲಿ ಉಲ್ಲೇಖಿಸಿಲ್ಲ. ಹೀಗಾಗಿ ಇದನ್ನು ಒತ್ತಾಯಪೂರ್ವಕ ಎಂದು ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಾಧೀಶರು ತಿಳಿಸಿದರು.
ಮೊಹಮ್ಮದ್ ಸೈಯದ್ ನೂರಿ ಎಂಬುವವರು ಈ ಅರ್ಜಿ ಸಲ್ಲಿಸಿದ್ದರು. ದೇಶಭಕ್ತಿಯನ್ನು ಯಾರ ಮೇಲೂ ಹೇರಲು ಸಾಧ್ಯವಿಲ್ಲ ಮತ್ತು ಇದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು.
“ಸುತ್ತೋಲೆಯಲ್ಲಿ ‘ಹಾಡಬಹುದು’ (May) ಎಂಬ ಪದವನ್ನು ಬಳಸಲಾಗಿದೆಯೇ ಹೊರತು ‘ಹಾಡಲೇಬೇಕು’ (Must) ಎಂದಲ್ಲ. ಒಂದು ವೇಳೆ ಹಾಡದ ಕಾರಣಕ್ಕೆ ಯಾರಾದರೂ ತಾರತಮ್ಯ ಎದುರಿಸಿದರೆ ಅಥವಾ ಶಿಕ್ಷೆಗೆ ಒಳಗಾದರೆ ಅಂತಹ ಸಂದರ್ಭದಲ್ಲಿ ಮಾತ್ರ ನ್ಯಾಯಾಲಯಕ್ಕೆ ಬರಬಹುದು ಎಂದು ಕೋರ್ಟ್ ತಿಳಿಸಿದೆ.








