ನವದೆಹಲಿ: ಅಡುಗೆ ಅನಿಲ (LPG) ಸಿಲಿಂಡರ್ ಬುಕಿಂಗ್ ಮಾಡುವ ಕಾಲಮಿತಿಯನ್ನು 35 ದಿನಗಳಿಗೆ ಹೆಚ್ಚಿಸಲಾಗಿದೆ ಎಂಬ ಸುದ್ದಿಯನ್ನು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಸಂಪೂರ್ಣವಾಗಿ ತಿರಸ್ಕರಿಸಿದೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವರದಿಗಳು “ಆಧಾರರಹಿತ ಮತ್ತು ದಾರಿ ತಪ್ಪಿಸುವಂತವು” ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಕಳೆದ ಕೆಲವು ದಿನಗಳಿಂದ “ಒಂದು ಸಿಲಿಂಡರ್ ಪಡೆದ 35 ದಿನಗಳ ನಂತರವಷ್ಟೇ ಮುಂದಿನ ಬುಕಿಂಗ್ ಸಾಧ್ಯ” ಎಂಬ ತಪ್ಪು ಮಾಹಿತಿ ಜನರಲ್ಲಿ ಆತಂಕ ಮೂಡಿಸಿತ್ತು. ಆದರೆ, ಸರ್ಕಾರವು ಅಂತಹ ಯಾವುದೇ ಹೊಸ ಆದೇಶ ಹೊರಡಿಸಿಲ್ಲ ಎಂದು ಬುಧವಾರ (ಮಾರ್ಚ್ 25, 2026) ತಿಳಿಸಿದೆ.
ಸದ್ಯದ ನಿಯಮಗಳ ಪ್ರಕಾರ, ನಗರ ಪ್ರದೇಶಗಳಲ್ಲಿ 25 ದಿನಗಳ ನಂತರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 45 ದಿನಗಳ ನಂತರ ರೀಫಿಲ್ ಬುಕಿಂಗ್ ಮಾಡಲು ಅವಕಾಶವಿದೆ. ಈ ಹಳೆಯ ನಿಯಮದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ದೇಶದಲ್ಲಿ ಎಲ್‌ಪಿಜಿ ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿದೆ. ಪಶ್ಚಿಮ ಏಷ್ಯಾದ ಬಿಕ್ಕಟ್ಟಿನ ನಡುವೆಯೂ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗಿಲ್ಲ. ಹೀಗಾಗಿ ಗ್ರಾಹಕರು ಆತಂಕಕ್ಕೆ ಒಳಗಾಗಿ ‘ಪ್ಯಾನಿಕ್ ಬುಕಿಂಗ್’ (Panic Booking) ಮಾಡಬಾರದು ಎಂದು ಸರ್ಕಾರ ಮನವಿ ಮಾಡಿದೆ.








