ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಬಗೆಗಿನ ಅಧಿಕೃತ ಮಾಹಿತಿ ಈಗ ಹೊರಬಿದ್ದಿದ್ದು, ಒಟ್ಟು 2,84,881 ಹುದ್ದೆಗಳು ಖಾಲಿ ಇರುವುದು ದೃಢಪಟ್ಟಿದೆ. ಶಾಸಕಿ ಅನ್ನಪೂರ್ಣ ಈ. (ಸಂದೂರು) ಅವರು ಕೇಳಿದ ಪ್ರಶ್ನೆಗೆ ಸರ್ಕಾರ ನೀಡಿರುವ ಈ ಅಂಕಿಅಂಶಗಳು ಆಡಳಿತ ಯಂತ್ರದಲ್ಲಿನ ಭಾರಿ ಪ್ರಮಾಣದ ಸಿಬ್ಬಂದಿ ಕೊರತೆಯನ್ನು ಎತ್ತಿ ತೋರಿಸುತ್ತಿವೆ.
ಶಿಕ್ಷಣ ಮತ್ತು ಆರೋಗ್ಯ ಇಲಾಖೆಯಲ್ಲಿ ಅತಿ ಹೆಚ್ಚು ಖಾಲಿ ಹುದ್ದೆ
ವರದಿಯ ಪ್ರಕಾರ, ರಾಜ್ಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಲ್ಲಿ ಅತಿ ಹೆಚ್ಚು ಅಂದರೆ 79,694 ಹುದ್ದೆಗಳು ಖಾಲಿ ಇವೆ. ಇದರಲ್ಲಿ ಗ್ರೂಪ್ ‘ಸಿ’ ವೃಂದದ ಹುದ್ದೆಗಳೇ ಅತಿ ಹೆಚ್ಚಾಗಿದ್ದು (66,895), ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ಮೇಲೆ ಇದು ನೇರ ಪರಿಣಾಮ ಬೀರಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಎರಡನೇ ಸ್ಥಾನದಲ್ಲಿದ್ದು, ಇಲ್ಲಿ 37,572 ಹುದ್ದೆಗಳು ಭರ್ತಿಯಾಗಬೇಕಿದೆ. ಗೃಹ ಇಲಾಖೆಯಲ್ಲಿ (ಒಳಾಡಳಿತ) 28,188 ಹುದ್ದೆಗಳು ಖಾಲಿಯಿದ್ದು, ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದ ಇದು ಆತಂಕಕಾರಿ ಅಂಶವಾಗಿದೆ.









