ನವದೆಹಲಿ:ದೇಶದ ರಾಜಕೀಯ ಇತಿಹಾಸದಲ್ಲಿ ಮೈಲಿಗಲ್ಲಾಗಲಿರುವ ‘ನಾರಿ ಶಕ್ತಿ ವಂದನ ಅಧಿನಿಯಮ’ (ಮಹಿಳಾ ಮೀಸಲಾತಿ ಕಾಯ್ದೆ) ಜಾರಿಯನ್ನು ವೇಗಗೊಳಿಸಲು ಕೇಂದ್ರ ಸರ್ಕಾರ ಭರ್ಜರಿ ತಯಾರಿ ನಡೆಸುತ್ತಿದೆ. ಹೊಸ ಜನಗಣತಿಯ ವಿಳಂಬದ ನಡುವೆಯೂ, 2011ರ ಜನಗಣತಿಯ ದತ್ತಾಂಶಗಳನ್ನು ಬಳಸಿಕೊಂಡು ಮೀಸಲಾತಿಯನ್ನು ಅನುಷ್ಠಾನಕ್ಕೆ ತರುವ ಬಗ್ಗೆ ಗಂಭೀರ ಚಿಂತನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
2023ರಲ್ಲಿ ಅಂಗೀಕರಿಸಲ್ಪಟ್ಟ ಕಾಯ್ದೆಯ ಪ್ರಕಾರ, ಮುಂದಿನ ಜನಗಣತಿ ಮತ್ತು ಅದರ ನಂತರದ ಕ್ಷೇತ್ರ ಪುನರ್ವಿಂಗಡಣೆಯ (Delimitation) ಬಳಿಕವಷ್ಟೇ ಮೀಸಲಾತಿ ಜಾರಿಯಾಗಬೇಕಿತ್ತು.
ಲೋಕಸಭೆಯ ಒಟ್ಟು ಸೀಟುಗಳ ಸಂಖ್ಯೆಯನ್ನು ಈಗಿರುವ 543ರಿಂದ 816ಕ್ಕೆ ಏರಿಸುವ ಪ್ರಸ್ತಾವನೆ ಇದೆ. ಒಟ್ಟು ಸೀಟುಗಳಲ್ಲಿ ಶೇ. 33ರಷ್ಟು ಅಂದರೆ ಸುಮಾರು 273 ಸ್ಥಾನಗಳು ಮಹಿಳೆಯರಿಗಾಗಿಯೇ ಮೀಸಲಿರಲಿವೆ.ಹೊಸ ಜನಗಣತಿಗಾಗಿ ಕಾಯುವ ಬದಲು 2011ರ ದತ್ತಾಂಶವನ್ನೇ ಆಧರಿಸಿ ಕ್ಷೇತ್ರಗಳ ಮರುವಿಂಗಡಣೆ ಮಾಡುವ ಸಾಧ್ಯತೆ ಇದೆ.
ಸರ್ಕಾರವು ಈ ಸಂಬಂಧ ಸಂವಿಧಾನಕ್ಕೆ ತಿದ್ದುಪಡಿ ತರಲು ಉದ್ದೇಶಿಸಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ 2029ರ ಲೋಕಸಭಾ ಚುನಾವಣೆಯೊಳಗೆ ಮಹಿಳಾ ಮೀಸಲಾತಿ ಜಾರಿಗೆ ಬರಲಿದೆ. ಇದರಿಂದಾಗಿ ಉತ್ತರ ಪ್ರದೇಶ ಮತ್ತು ಉತ್ತರಾಖಂಡದಂತಹ ರಾಜ್ಯಗಳ ಮುಂದಿನ ವಿಧಾನಸಭಾ ಚುನಾವಣೆಗಳಲ್ಲೂ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಗುವ ಸಾಧ್ಯತೆಯಿದೆ








