ಜಿನೀವಾ: ಮಾನವ ನಿರ್ಮಿತ ಹಸಿರುಮನೆ ಅನಿಲಗಳ ಬಿಡುಗಡೆಯಿಂದಾಗಿ ಭೂಮಿಯ ಹವಾಮಾನ ವ್ಯವಸ್ಥೆಯು ಇತಿಹಾಸದಲ್ಲೇ ಕಾಣದಷ್ಟು ಅಸ್ತವ್ಯಸ್ತಗೊಂಡಿದೆ ಎಂದು ವಿಶ್ವ ಹವಾಮಾನ ಸಂಸ್ಥೆ (WMO) ಸೋಮವಾರ ಬಿಡುಗಡೆ ಮಾಡಿದ ತನ್ನ ವಾರ್ಷಿಕ ವರದಿಯಲ್ಲಿ ಎಚ್ಚರಿಸಿದೆ. ಭೂಮಿಯು ಹತ್ತಿಕ್ಕುತ್ತಿರುವ ಶಾಖದ ಪ್ರಮಾಣ (Energy Imbalance) ಸಾರ್ವಕಾಲಿಕ ದಾಖಲೆ ಬರೆದಿದ್ದು, ಜಗತ್ತು ಈಗ ‘ಹವಾಮಾನ ತುರ್ತು ಪರಿಸ್ಥಿತಿ’ಯಲ್ಲಿದೆ ಎಂದು ವಿಶ್ವಸಂಸ್ಥೆಯ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್ ಆತಂಕ ವ್ಯಕ್ತಪಡಿಸಿದ್ದಾರೆ.
”ಭೂಮಿಯು ತನ್ನ ಮಿತಿಗಳನ್ನು ಮೀರಿ ದೂಡಲ್ಪಡುತ್ತಿದೆ. ಪ್ರತಿ ಹವಾಮಾನ ಸೂಚಕವೂ ಅಪಾಯದ ಕೆಂಪು ಸಂಕೇತವನ್ನು ನೀಡುತ್ತಿದೆ” ಎಂದು ಗುಟೆರೆಸ್ ಎಚ್ಚರಿಸಿದ್ದಾರೆ.2015 ರಿಂದ 2025 ರವರೆಗಿನ ಅವಧಿಯು ಇತಿಹಾಸದಲ್ಲೇ ಅತ್ಯಂತ ಉಷ್ಣಾಂಶದ 11 ವರ್ಷಗಳು ಎಂದು ವರದಿ ದೃಢಪಡಿಸಿದೆ. 2025ನೇ ವರ್ಷವು ದಾಖಲಿತ ಇತಿಹಾಸದಲ್ಲೇ ಎರಡನೇ ಅಥವಾ ಮೂರನೇ ಅತಿ ಹೆಚ್ಚು ಉಷ್ಣಾಂಶದ ವರ್ಷವಾಗಿ ಹೊರಹೊಮ್ಮಿದೆ.
ಮೊದಲ ಬಾರಿಗೆ ಈ ವರದಿಯಲ್ಲಿ ಭೂಮಿಯ ಇಂಧನ ಅಸಮತೋಲನವನ್ನು ಪ್ರಮುಖ ಸೂಚಕವಾಗಿ ಬಳಸಲಾಗಿದೆ. ಸೂರ್ಯನಿಂದ ಬರುವ ಶಾಖ ಮತ್ತು ಭೂಮಿಯಿಂದ ವಾಪಸ್ ಹೋಗುವ ಶಾಖದ ನಡುವಿನ ವ್ಯತ್ಯಾಸವು 2025ರಲ್ಲಿ ಗರಿಷ್ಠ ಮಟ್ಟಕ್ಕೆ ತಲುಪಿದೆ. ಈ ಹೆಚ್ಚುವರಿ ಶಾಖದ ಶೇ. 91ಕ್ಕೂ ಹೆಚ್ಚು ಭಾಗವನ್ನು ಸಾಗರಗಳು ಹೀರಿಕೊಳ್ಳುತ್ತಿವೆ.
ಸಾಗರಗಳ ಶಾಖದ ಪ್ರಮಾಣವು 1960ರ ನಂತರದ ಅತ್ಯಂತ ಗರಿಷ್ಠ ಮಟ್ಟಕ್ಕೆ ಏರಿದೆ. ಇದರಿಂದ ಹವಳದ ದಿಬ್ಬಗಳು ನಾಶವಾಗುತ್ತಿವೆ ಮತ್ತು ಸಮುದ್ರ ಮಟ್ಟ ಏರಿಕೆಯು ವೇಗ ಪಡೆದುಕೊಂಡಿದೆ.ಕಾರ್ಬನ್ ಡೈಆಕ್ಸೈಡ್, ಮೀಥೇನ್ ಮತ್ತು ನೈಟ್ರಸ್ ಆಕ್ಸೈಡ್ಗಳ ಸಾಂದ್ರತೆಯು ಕಳೆದ 8 ಲಕ್ಷ ವರ್ಷಗಳಲ್ಲೇ ಅತಿ ಹೆಚ್ಚು ಮಟ್ಟಕ್ಕೆ ತಲುಪಿದೆ.ಹವಾಮಾನ ವೈಪರೀತ್ಯದಿಂದಾಗಿ ಜಗತ್ತಿನಾದ್ಯಂತ ಭೀಕರ ಶಾಖದ ಅಲೆಗಳು (Heatwaves), ಕಾಡ್ಗಿಚ್ಚು, ಪ್ರವಾಹ ಮತ್ತು ಸತತ ಚಂಡಮಾರುತಗಳು ಸಂಭವಿಸುತ್ತಿವೆ ಎಂದು ವರದಿ ಬೆಟ್ಟುಮಾಡಿದೆ.








