ಬೆಂಗಳೂರು: ಛಲವೊಂದಿದ್ದರೆ ಎಂತಹ ಕಷ್ಟಗಳನ್ನೂ ಮೆಟ್ಟಿ ನಿಲ್ಲಬಹುದು ಎಂಬುದಕ್ಕೆ ಮಂಡ್ಯದ ಕ್ರೀಡಾಪಟು ವಿಜಯಕುಮಾರಿ ಜಿ.ಕೆ. ಅವರ ಸಾಧನೆಯೇ ಸಾಕ್ಷಿ. ಮಾರ್ಚ್ 21ರ ಶನಿವಾರ ಕೇರಳದ ತ್ರಿವೇಂಡ್ರಮ್‌ನಲ್ಲಿ ನಡೆದ ‘7ನೇ ಇಂಡಿಯನ್ ಓಪನ್ 400 ಮೀಟರ್ ಸ್ಪರ್ಧೆ’ಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ವಿಜಯಕುಮಾರಿ ಅವರು 2ನೇ ಸ್ಥಾನ ಪಡೆಯುವ ಮೂಲಕ ಬೆಳ್ಳಿ ಪದಕವನ್ನು ಮುಡಿಗೇರಿಸಿಕೊಂಡು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಇದಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಕಾಲಿಕ ನೆರವು ಕಾರಣವಾಯಿತು ಎಂಬುದಾಗಿ ವಿಜಯಕುಮಾರಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲೂಕಿನ ಗೌಡೇನಹಳ್ಳಿ ಮೂಲದ ವಿಜಯಕುಮಾರಿ, ಆರ್ಥಿಕ ಮುಗ್ಗಟ್ಟು ಮತ್ತು ಗಾಯದ ಸಮಸ್ಯೆಯಿಂದ ಕ್ರೀಡಾಲೋಕದಿಂದಲೇ ದೂರ ಸರಿಯುವ ನಿರ್ಧಾರಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ಅವರ ನೆರವಿಗೆ ಬಂದಿದ್ದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್. ಇವರ ಕಷ್ಟಕ್ಕೆ ಸ್ಪಂದಿಸಿದ ಡಿಸಿಎಂ ಅವರು ಸರ್ಕಾರದಿಂದ 10 ಲಕ್ಷ ರೂಪಾಯಿ ಪ್ರೋತ್ಸಾಹಧನ ಘೋಷಿಸಿದ್ದರು. ಆ ಪೈಕಿ ಮೊದಲ ಕಂತಿನ 5 ಲಕ್ಷ ರೂಪಾಯಿಗಳನ್ನು ಬಿಬಿಎಂಪಿ ಮೂಲಕ ಈಗಾಗಲೇ ಹಸ್ತಾಂತರಿಸಿದ್ದು, ಇದು ಅವರ ತರಬೇತಿ ಮತ್ತು ಚಿಕಿತ್ಸೆಗೆ ಸಂಜೀವಿನಿಯಾಯಿತು.
ಕೃತಜ್ಞತೆ ಸಲ್ಲಿಸಿದ ಸಾಧಕಿ:
ಪದಕ ಗೆದ್ದ ನಂತರ ಮಾತನಾಡಿದ ವಿಜಯಕುಮಾರಿ, “ರಾಷ್ಟ್ರ ಮಟ್ಟದ ಈ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಗೆದ್ದಿರುವುದು ಖುಷಿ ತಂದಿದೆ. ನನ್ನ ಸಂಕಷ್ಟದ ಸಮಯದಲ್ಲಿ ಧೈರ್ಯ ತುಂಬಿ ಆರ್ಥಿಕ ಸಹಾಯ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್ ಸರ್ ಅವರಿಗೆ ನಾನು ಚಿರಋಣಿ. ಅವರ ಬೆಂಬಲವಿಲ್ಲದಿದ್ದರೆ ಈ ಮಟ್ಟದ ಸಾಧನೆ ಅಸಾಧ್ಯವಾಗಿತ್ತು” ಎಂದು ಭಾವುಕರಾಗಿ ನುಡಿದಿದ್ದಾರೆ.
ಕಾಮನ್‌ವೆಲ್ತ್, ಏಷ್ಯನ್ ಗೇಮ್ಸ್ ಮುಂದಿನ ಗುರಿ
ಈಗಾಗಲೇ ಏಕಲವ್ಯ ಮತ್ತು ರಾಜ್ಯೋತ್ಸವ ಪ್ರಶಸ್ತಿಗಳಿಗೆ ಭಾಜನರಾಗಿರುವ ಇವರು, ಮುಂದಿನ ದಿನಗಳಲ್ಲಿ ಕಾಮನ್‌ವೆಲ್ತ್ ಮತ್ತು ಏಷ್ಯನ್ ಗೇಮ್ಸ್‌ಗಳಲ್ಲಿ ಭಾಗವಹಿಸಿ ದೇಶಕ್ಕೆ ಪದಕ ತರುವ ಗುರಿಯನ್ನು ಹೊಂದಿದ್ದಾರೆ.
ರಾಜ್ಯಕ್ಕೆ ಹೆಮ್ಮೆ ತಂದ ಮಂಡ್ಯದ ಕುವರಿ ಎಂದ ಎಂಎಲ್ಸಿ ದಿನೇಶ್ ಗೂಳಿಗೌಡ
ಈ ಬಗ್ಗೆ ಮಾತನಾಡಿರುವಂತ ವಿಧಾನ ಪರಿಷತ್ ಸದಸ್ಯ ಹಾಗೂ ಗ್ಯಾರಂಟಿ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ಅವರು, ವಿಜಯಕುಮಾರಿ ಅವರ ಈ ಸಾಧನೆ ಮಂಡ್ಯ ಜಿಲ್ಲೆ ಮತ್ತು ಇಡೀ ಕರ್ನಾಟಕ ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿದೆ. ಅವರ ಕಠಿಣ ಶ್ರಮ, ಛಲ ಮತ್ತು ಸರ್ಕಾರದ ಬೆಂಬಲವು ಇತರ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಲಿದೆ. ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರ ನೆರವು ನಿಜಕ್ಕೂ ಒಬ್ಬ ಕ್ರೀಡಾಪಟುವಿನ ಬೆಳವಣಿಗೆಗೆ ಪೂರಕವಾಗಿದೆ. ಅಲ್ಲದೆ, ವಿಜಯಕುಮಾರಿಯವರ ಮುಂದಿನ ಕ್ರೀಡಾ ಸಾಧನೆಗೆ ಬೆನ್ನುಲುಭಾಗಿ ನಿಲ್ಲುವುದಾಗಿ ಡಿಸಿಎಂ ಹೇಳಿದ್ದಾರೆ. ಮುಂದಿನ ಕ್ರೀಡೆಗಳಿಗೆ ಅಗತ್ಯ ಸಹಕಾರ ನೀಡುವುದಾಗಿಯೂ ಹೇಳಿದ್ದಾರೆ. ಇನ್ನು 5 ಲಕ್ಷ ರೂಪಾಯಿಯನ್ನು ಶೀಘ್ರದಲ್ಲೇ ಅವರಿಗೆ ನೀಡುವುದಲ್ಲದೆ, ಅವರನ್ನು ಕರೆಸಿ ಸನ್ಮಾನಿಸುವುದಾಗಿಯೂ ಹೇಳಿದ್ದಾರೆ. ವಿಜಯಕುಮಾರಿ ಅವರು ಮುಂದಿನ ಕ್ರೀಡಾಕೂಟಗಳಲ್ಲಿ ಇನ್ನೂ ಹೆಚ್ಚಿನ ಸಾಧನೆಗಳನ್ನು ಮಾಡಿ ರಾಜ್ಯ ಮತ್ತು ದೇಶದ ಕೀರ್ತಿ ಹೆಚ್ಚಿಸಲಿ ಎಂದಿದ್ದಾರೆ.
SHOCKING: ಕೌಟುಂಬಿಕ ಕಲಹದಿಂದ ಮಲಗಿದ್ದ ಪತಿಯ ಮರ್ಮಾಂಗಕ್ಕೆ ಒದ್ದ ಪತ್ನಿ! ಗಂಡನ ಸ್ಥಿತಿ ಗಂಭೀರ
ಅಮೆರಿಕಕ್ಕೆ ಬಿಗ್ ಶಾಕ್: ಇರಾನ್ ನಡೆಸಿದ ಪ್ರತಿದಾಳಿಗೆ US ನ 6,700 ಕೋಟಿ ರೂ. ಮೌಲ್ಯದ ಆಸ್ತಿ ಪಾಸ್ತಿ ನಾಶ!








