ನವದೆಹಲಿ : ಹಾರ್ಮುಜ್ ಜಲಸಂಧಿಯನ್ನು 48 ಗಂಟೆಯೊಳಗೆ ಸಂಪೂರ್ಣ ಓಪನ್ ಮಾಡಬೇಕು ಎಂದು ಇರಾನ್‌ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗಡುವು ನೀಡಿದ್ದಾರೆ. ಹೌದು ಡೊನಾಲ್ಡ್ ಟ್ರಂಪ್ ಇರಾನ್‌ಗೆ 48 ಗಂಟೆಗಳ ಗಡುವು ನೀಡಿದ್ದಾರೆ, ಹಾರ್ಮುಜ್ ಜಲಸಂಧಿ ತೆರೆಯದಿದ್ದರೆ, ಇರಾನ್‌ನ ವಿದ್ಯುತ್ ಸ್ಥಾವರ ನಾಶಪಡಿಸುವುದಾಗಿ ಬೆದರಿಕೆ ಹಾಕಿದ್ದಾರೆ.
ಅಮೆರಿಕ-ಇಸ್ರೇಲ್ ದಾಳಿಯ ನಂತರ ಇರಾನ್ ಜಲಸಂಧಿಯನ್ನು ಮುಚ್ಚಿತ್ತು. ಇದು ಜಾಗತಿಕ ತೈಲ ಪೂರೈಕೆ, ಬೆಲೆ ಏರಿಕೆಗೆ ಕಾರಣವಾಗಿದೆ. ವಿಶ್ವದ ತೈಲ ಸಾಗಣೆಯ ಪ್ರಮುಖ ಮಾರ್ಗವಾಗಿರುವ ಈ ಜಲಸಂಧಿ ನಿರ್ಬಂಧವು ಹಲವು ದೇಶಗಳ ಆತಂಕಕ್ಕೆ ಕಾರಣವಾಗಿದೆ.
ಫೆಬ್ರವರಿ 28 ರಂದು ಟೆಹ್ರಾನ್ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ದಾಳಿ ನಡೆಸಿದ ನಂತರ, ಇರಾನ್ ವಿರುದ್ಧ ದಾಳಿಯಲ್ಲಿ ಭಾಗಿಯಾಗಿರುವ ದೇಶಗಳಿಗೆ, ಹೆಚ್ಚಿನ ಹಡಗು ಸಂಚಾರಕ್ಕಾಗಿ ಇರಾನ್ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿತ್ತು. ಇನ್ನು ಟ್ರಂಪ್ ಅವರ ಎಚ್ಚರಿಕೆಗೆ ಪ್ರತಿಕ್ರಿಯಿಸಿರುವ ಇರಾನ್ ಸೇನೆಯು, ಈ ಪ್ರದೇಶದಲ್ಲಿ ಅಮೆರಿಕಕ್ಕೆ ಸೇರಿದ ಎಲ್ಲಾ ಇಂಧನ, ತಂತ್ರಜ್ಞಾನ ಮತ್ತು ಉಪ್ಪುನೀರಿನ ನಿರ್ಮೂಲನ ಮೂಲಸೌಕರ್ಯಗಳನ್ನು ಟಾರ್ಗೆಟ್ ಮಾಡಿ ಹೊಡೆಯುವುದಾಗಿ ಬೆದರಿಕೆ ಹಾಕಿದೆ.
ಶತ್ರುಗಳು ಇರಾನ್‌ನ ಇಂಧನ ಮೂಲಸೌಕರ್ಯವನ್ನು ದಾಳಿಗೆ ಗುರಿಯಾಗಿಸಿಕೊಂಡರೆ, ಅಮೆರಿಕ ಮತ್ತು ಈ ಪ್ರದೇಶದ ಆಡಳಿತಕ್ಕೆ ಸೇರಿದ ಎಲ್ಲಾ ಇಂಧನ, ಮಾಹಿತಿ ತಂತ್ರಜ್ಞಾನ ಮತ್ತು ಉಪ್ಪುನೀರಿನ ನಿರ್ಮೂಲನ ಮೂಲಸೌಕರ್ಯಗಳನ್ನು ಟಾರ್ಗೆಟ್ ಮಾಡಲಾಗುವುದು ಎಂದು ಇರಾನಿನ ಮಿಲಿಟರಿಯ ಕಾರ್ಯಾಚರಣೆಯ ಕಮಾಂಡ್ ಖತಮ್ ಅಲ್-ಅನ್ಬಿಯಾ ಕೌಂಟರ್ ಕೊಟ್ಟಿದ್ದಾರೆ.








