ನವದೆಹಲಿ :ದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್‌ನಲ್ಲಿರುವ ದೇಶದ ಹಳೆಯ ಮತ್ತು ಪ್ರತಿಷ್ಠಿತ ಸುದ್ದಿ ಸಂಸ್ಥೆ ‘ಯುನೈಟೆಡ್ ನ್ಯೂಸ್ ಆಫ್ ಇಂಡಿಯಾ’ (UNI) ಕಚೇರಿಯನ್ನು ಶುಕ್ರವಾರ ರಾತ್ರಿ ಸೀಲ್ ಮಾಡಲಾಗಿದೆ. ಭೂ ಮಂಜೂರಾತಿ ರದ್ದತಿಯನ್ನು ಪ್ರಶ್ನಿಸಿ ಸಂಸ್ಥೆಯು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದ ಬೆನ್ನಲ್ಲೇ, ಭೂ ಮತ್ತು ಅಭಿವೃದ್ಧಿ ಕಚೇರಿ (L&DO) ಅಧಿಕಾರಿಗಳು ಪೊಲೀಸರ ಭದ್ರತೆಯಲ್ಲಿ ಈ ಕ್ರಮ ಕೈಗೊಂಡಿದ್ದಾರೆ.
ಒಪ್ಪಂದದ ಉಲ್ಲಂಘನೆ: 1979ರಲ್ಲಿ ರಫಿ ಮಾರ್ಗದಲ್ಲಿ ಯುಎನ್‌ಐಗೆ ಕಚೇರಿ ಸಂಕೀರ್ಣ ನಿರ್ಮಿಸಲು ಭೂಮಿ ಮಂಜೂರು ಮಾಡಲಾಗಿತ್ತು. ಆದರೆ, ಕಳೆದ 45 ವರ್ಷಗಳಿಂದ ಸಂಸ್ಥೆಯು ಅಲ್ಲಿ ಯಾವುದೇ ಕಟ್ಟಡ ನಿರ್ಮಿಸದೆ ನಿಯಮಗಳನ್ನು ಉಲ್ಲಂಘಿಸಿದೆ ಎಂದು ನ್ಯಾಯಾಲಯ ಹೇಳಿದೆ.
“ಅಮೂಲ್ಯವಾದ ಸಾರ್ವಜನಿಕ ಭೂಮಿಯನ್ನು ದಶಕಗಳ ಕಾಲ ಯಾವುದೇ ಬಳಕೆಯಿಲ್ಲದೆ ಒತ್ತೆ ಇಟ್ಟುಕೊಳ್ಳಲು ಸಾಧ್ಯವಿಲ್ಲ,” ಎಂದು ಜಸ್ಟಿಸ್ ಸಚಿನ್ ದತ್ತಾ ಅವರ ಪೀಠವು ಅಭಿಪ್ರಾಯಪಟ್ಟಿದೆ. ಸಂಸ್ಥೆಯು ಆರ್ಥಿಕ ಸಂಕಷ್ಟದ ನೆಪ ಹೇಳಿರುವುದನ್ನು ನ್ಯಾಯಾಲಯ ತಿರಸ್ಕರಿಸಿದೆ. ಹೈಕೋರ್ಟ್ ತೀರ್ಪು ನೀಡಿದ ಕೆಲವೇ ಗಂಟೆಗಳಲ್ಲಿ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಕಚೇರಿಯನ್ನು ವಶಕ್ಕೆ ಪಡೆದಿದ್ದಾರೆ.








