ವಾಷಿಂಗ್ಟನ್/ಟೆಹ್ರಾನ್: ಇರಾನ್ ಮೇಲೆ ವಾಯುದಾಳಿ ನಡೆಸುತ್ತಿದ್ದ ಅಮೆರಿಕದ ಅತ್ಯಂತ ದುಬಾರಿ ಮತ್ತು ಶಕ್ತಿಶಾಲಿ F-35 ಸ್ಟೆಲ್ತ್ ಫೈಟರ್ ಜೆಟ್ ಇರಾನ್‌ನ ವಾಯು ರಕ್ಷಣಾ ವ್ಯವಸ್ಥೆಯ ದಾಳಿಗೆ ತುತ್ತಾಗಿ ಜಖಂಗೊಂಡಿದೆ. ತೀವ್ರ ಹಾನಿಗೊಳಗಾದ ವಿಮಾನವು ಮಧ್ಯಪ್ರಾಚ್ಯದ ಅಮೆರಿಕನ್ ವಾಯು ನೆಲೆಯೊಂದರಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ವರದಿಯಾಗಿದೆ.
2026ರ ಫೆಬ್ರವರಿಯಲ್ಲಿ ಯುದ್ಧ ಆರಂಭವಾದ ನಂತರ, ಇರಾನ್ ಪಡೆಯು ಅಮೆರಿಕದ ಐದನೇ ತಲೆಮಾರಿನ (5th Generation) F-35 ವಿಮಾನವನ್ನು ಯಶಸ್ವಿಯಾಗಿ ಗುರಿಯಾಗಿಸಿರುವುದು ಇದೇ ಮೊದಲು ಎನ್ನಲಾಗಿದೆ.
ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC), “ನಮ್ಮ ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆಯು ಅಮೆರಿಕದ F-35 ವಿಮಾನವನ್ನು ಹೊಡೆದು ಉರುಳಿಸಿದೆ ಅಥವಾ ತೀವ್ರವಾಗಿ ಜಖಂಗೊಳಿಸಿದೆ” ಎಂದು ವಿಡಿಯೋ ಸಹಿತ ಅಧಿಕೃತವಾಗಿ ಹೇಳಿಕೊಂಡಿದೆ.
ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ವಕ್ತಾರ ಕ್ಯಾಪ್ಟನ್ ಟಿಮ್ ಹಾಕಿನ್ಸ್ ಅವರು, “F-35 ವಿಮಾನವು ಇರಾನ್ ಮೇಲೆ ಯುದ್ಧ ಕಾರ್ಯಾಚರಣೆಯಲ್ಲಿದ್ದಾಗ ತಾಂತ್ರಿಕ ತೊಂದರೆಯಿಂದ ಅಥವಾ ದಾಳಿಯಿಂದಾಗಿ ತುರ್ತು ಭೂಸ್ಪರ್ಶ ಮಾಡಿದೆ. ವಿಮಾನವು ಸುರಕ್ಷಿತವಾಗಿ ಇಳಿದಿದ್ದು, ಪೈಲಟ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ” ಎಂದು ತಿಳಿಸಿದ್ದಾರೆ.ಶತ್ರುಗಳ ರಾಡಾರ್‌ಗೆ ಸಿಗದಂತೆ ವಿನ್ಯಾಸಗೊಳಿಸಲಾದ ಈ ಸ್ಟೆಲ್ತ್ ವಿಮಾನವನ್ನು ಇರಾನ್ ಹೇಗೆ ಪತ್ತೆಹಚ್ಚಿ ದಾಳಿ ಮಾಡಿತು ಎಂಬುದು ಈಗ ರಕ್ಷಣಾ ತಜ್ಞರಲ್ಲಿ ಕುತೂಹಲ ಮೂಡಿಸಿದೆ. ಇರಾನ್ ಈ ದಾಳಿಗೆ ‘ಇನ್‌ಫ್ರಾರೆಡ್ ಸೆನ್ಸಾರ್’ ತಂತ್ರಜ್ಞಾನ ಬಳಸಿರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ








