ಮೈಸೂರು: ಭ್ರಷ್ಟಾಚಾರದ ಹಣ ಪಡೆಯುವಾಗ ಲೋಕಾಯುಕ್ತ ಪೊಲೀಸರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೊಬ್ಬರು (PDO), ಅಧಿಕಾರಿಗಳ ಮುಂದೆಯೇ ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಆತಂಕಕಾರಿ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನಲ್ಲಿ ನಡೆದಿದೆ.
ಘಟನೆಯ ವಿವರ:
ಹುಣಸೂರು ತಾಲೂಕಿನ ಮುಳ್ಳೂರು ಗ್ರಾಮ ಪಂಚಾಯಿತಿಯ ಪಿಡಿಒ ಮಂಜುಳಾ ಅವರು ಲೋಕಾಯುಕ್ತ ಬಲೆಗೆ ಬಿದ್ದವರು. ನೀರುಗಂಟಿ ಮಹದೇವ್ ಎಂಬುವವರಿಂದ 25,000 ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಈ ಕಾರ್ಯಾಚರಣೆ ನಡೆದಿದೆ.
ದೂರುದಾರ ಮಹದೇವ್ ಅವರ ತಂದೆ ಸ್ವಾಮಿ ಅವರು ಕೆಲಸದಲ್ಲಿದ್ದಾಗಲೇ ನಿಧನರಾಗಿದ್ದರು. ಅನುಕಂಪದ ಆಧಾರದ ಮೇಲೆ ಮಹದೇವ್‌ಗೆ ಅದೇ ಪಂಚಾಯಿತಿಯಲ್ಲಿ ಕೆಲಸ ಸಿಕ್ಕಿತ್ತು. ಆದರೆ, ಮೃತ ತಂದೆಗೆ ಬರಬೇಕಿದ್ದ ಸುಮಾರು 2 ಲಕ್ಷ ರೂಪಾಯಿ ಬಾಕಿ ಸಂಬಳವನ್ನು ಬಿಡುಗಡೆ ಮಾಡಲು ಪಿಡಿಒ ಮಂಜುಳಾ ಅವರು 50,000 ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ. ಈ ಬಗ್ಗೆ ಮಹದೇವ್ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಕಚೇರಿಯಲ್ಲಿ ನಡೆದ ಹೈಡ್ರಾಮಾ:
ಯೋಜನೆಯಂತೆ ಮಹದೇವ್ ಅವರು ಮುಂಗಡವಾಗಿ 25,000 ರೂಪಾಯಿ ಹಣವನ್ನು ನೀಡುತ್ತಿದ್ದಾಗ, ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಮಂಜುಳಾ ಅವರನ್ನು ವಶಕ್ಕೆ ಪಡೆದರು. ಈ ವೇಳೆ ತೀವ್ರ ಗಾಬರಿಗೊಂಡ ಅಧಿಕಾರಿ, ಲೋಕಾಯುಕ್ತರ ಮುಂದೆಯೇ ಕಚೇರಿಯಲ್ಲಿದ್ದ ಹರಿತವಾದ ವಸ್ತುವಿನಿಂದ ತನ್ನ ಕೈಯನ್ನು ತಾನೇ ಕುಯ್ದುಕೊಂಡು ರಾದ್ಧಾಂತ ಮಾಡಿದ್ದಾರೆ.
ತಕ್ಷಣದ ಕ್ರಮ: ರಕ್ತದ ಮಡುವಿನಲ್ಲಿದ್ದ ಮಂಜುಳಾ ಅವರನ್ನು ಲೋಕಾಯುಕ್ತ ಪೊಲೀಸರು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.








