ಬೆಂಗಳೂರು: ರಾಜ್ಯದಾದ್ಯಂತ ಹಲವು ದಿನಗಳಿಂದ ವಾಡಿಕೆಯಂತಿದ್ದ ಬಿಸಿಲಿನ ಬೇಗೆಯ ನಡುವೆ ಈಗ ವರುಣನ ಪ್ರವೇಶವಾಗಿದೆ. ಸುಮಾರು 13 ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಹಾಗೂ ಆಲಿಕಲ್ಲು ಸಹಿತ ಭಾರಿ ಮಳೆಯಾಗಿದೆ.
ಸಿಡಿಲಿಗೆ ಬಾಲಕ ಸಾವು
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನಲ್ಲಿ ಸಿಡಿಲಿನ ಅಬ್ಬರಕ್ಕೆ 8ನೇ ತರಗತಿ ವಿದ್ಯಾರ್ಥಿ ಮಂಜುನಾಥ (14) ಎಂಬಾತ ಬಲಿಯಾಗಿದ್ದಾನೆ. ಮಳೆಯ ಆರ್ಭಟದ ನಡುವೆ ಸಿಡಿಲು ಬಡಿದ ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.
ಹಲವೆಡೆ ಆಲಿಕಲ್ಲು ಮಳೆ
ರಾಜ್ಯದ ವಿವಿಧ ಭಾಗಗಳಲ್ಲಿ ಮಳೆಯ ಅಬ್ಬರ ಜೋರಾಗಿತ್ತು. ಹಾಸನ ಜಿಲ್ಲೆಯ ಆಲೂರು ಸೇರಿದಂತೆ ಹಲವೆಡೆ ಆಲಿಕಲ್ಲು ಸಹಿತ ಭಾರಿ ಮಳೆಯಾಗಿದ್ದು, ಬಿರುಗಾಳಿಗೆ ಮರದ ರಂಬೆ-ಕೊಂಬೆಗಳು ಧರೆಗುರುಳಿವೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಸುತ್ತಮುತ್ತಲಿನ ಭಾಗಗಳಲ್ಲಿ ಒಂದು ಗಂಟೆಗೂ ಅಧಿಕ ಕಾಲ ಮಳೆಯಾಗಿದ್ದು, ಬಿಸಿಲಿನಿಂದ ಕಂಗಾಲಾಗಿದ್ದ ಜನತೆಗೆ ತಂಪಿನ ಅನುಭವ ನೀಡಿದೆ.
ಮೈಸೂರು ಜಿಲ್ಲೆಯ ಬೆಟ್ಟದಪುರ ಹಾಗೂ ಮೈಸೂರು ನಗರದ ಹಲವೆಡೆ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ. ದಾವಣಗೆರೆ, ಹರಿಹರ,ಹೊನ್ನಾಳಿ, ವಿಜಯನಗರ ಜಿಲ್ಲೆಯ ಕೊಟ್ಟೂರು ಹಾಗೂ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಬಾಳೇಹೊನ್ನೂರು ಭಾಗಗಳಲ್ಲಿಯೂ ಉತ್ತಮ ಮಳೆಯಾದ ವರದಿಯಾಗಿದೆ.








