ಬೆಂಗಳೂರು: ಬಾಲ್ಯವಿವಾಹ ಎಂಬ ಸಾಮಾಜಿಕ ಪಿಡುಗಿನ ವಿರುದ್ಧ ಸಮರ ಸಾರಿರುವ ಕರ್ನಾಟಕ ಹೈಕೋರ್ಟ್, ಈ ಕೃತ್ಯದಲ್ಲಿ ಭಾಗಿಯಾಗುವ ಪುರೋಹಿತರು, ದೇವಸ್ಥಾನದ ಆಡಳಿತ ಮಂಡಳಿ ಮತ್ತು ಕಲ್ಯಾಣ ಮಂಟಪದ ಮಾಲೀಕರ ವಿರುದ್ಧವೂ ಕ್ರಿಮಿನಲ್ ಕ್ರಮ ಜರುಗಿಸಬಹುದು ಎಂದು ಎಚ್ಚರಿಕೆ ನೀಡಿದೆ.
16 ವರ್ಷದ ಅಪ್ರಾಪ್ತ ಬಾಲಕಿಯೊಂದಿಗೆ ವಿವಾಹವಾದ ಪತಿ ಹಾಗೂ ಮದುವೆ ಮಾಡಿಕೊಟ್ಟ ಪೋಷಕರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ (FIR) ರದ್ದುಗೊಳಿಸಲು ನ್ಯಾಯಾಲಯ ನಿರಾಕರಿಸಿದೆ.
ಪ್ರಕರಣದ ಹಿನ್ನೆಲೆ:
ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ದೇವನಹಳ್ಳಿಯ ಮಂಜುನಾಥ್ ಎಂಬಾತನೊಂದಿಗೆ 16 ವರ್ಷದ ಬಾಲಕಿಯ ವಿವಾಹವನ್ನು ಆಕೆಯ ಪೋಷಕರು ನೆರವೇರಿಸಿದ್ದರು. ಬಾಲಕಿಗೆ 18 ವರ್ಷ ತುಂಬಿದ ನಂತರ ಮದುವೆಯನ್ನು ನೋಂದಣಿ (Register) ಮಾಡಿಸಲಾಗಿತ್ತು. “ಈಗ ಬಾಲಕಿಗೆ ವಯಸ್ಸಾಗಿರುವುದರಿಂದ ಮತ್ತು ಅವರು ಸಂಸಾರ ನಡೆಸುತ್ತಿರುವುದರಿಂದ ಬಾಲ್ಯವಿವಾಹದ ಕೇಸ್ ರದ್ದುಪಡಿಸಬೇಕು” ಎಂದು ಆರೋಪಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.
ಹೈಕೋರ್ಟ್‌ನ ಪ್ರಮುಖ ಅವಲೋಕನಗಳು:
ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠವು ಈ ಅರ್ಜಿಯನ್ನು ವಜಾಗೊಳಿಸಿ ಈ ಕೆಳಗಿನ ಪ್ರಮುಖ ಅಂಶಗಳನ್ನು ಹೇಳಿದೆ:
-
ಶಿಕ್ಷಣದ ಹಕ್ಕು ಭಗ್ನ: “ವಿದ್ಯೆ ಕಲಿಯುವ ವಯಸ್ಸಿನಲ್ಲಿ ಬಾಲಕಿಯ ಮೇಲೆ ಸಂಸಾರದ ಹೊಣೆ ಹೊರಿಸುವುದು ಸರಿಯಲ್ಲ. ಬಾಲ್ಯವಿವಾಹದಿಂದ ಬಾಲಕಿಯ ಶಿಕ್ಷಣದ ಕನಸುಗಳು ಭಗ್ನವಾಗುತ್ತವೆ” ಎಂದು ಪೀಠ ವಿಷಾದ ವ್ಯಕ್ತಪಡಿಸಿದೆ.
-
ಕಾಯ್ದೆಯ ಉದ್ದೇಶ ವಿಫಲ: ಕೇವಲ ಮದುವೆ ಈಗ ಕಾನೂನುಬದ್ಧವಾಗಿದೆ ಎಂಬ ಕಾರಣಕ್ಕೆ ಬಾಲ್ಯವಿವಾಹದ ಕೇಸ್ ರದ್ದುಪಡಿಸಿದರೆ, ‘ಬಾಲ್ಯ ವಿವಾಹ ನಿಷೇಧ ಕಾಯ್ದೆ’ಯ ಮೂಲ ಉದ್ದೇಶವೇ ವಿಫಲವಾಗುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
-
ಆಯೋಜಕರಿಗೂ ಸಂಕಷ್ಟ: ಇನ್ನು ಮುಂದೆ ದೇವಸ್ಥಾನಗಳಲ್ಲಿ ಬಾಲ್ಯವಿವಾಹ ನಡೆದರೆ ಅಲ್ಲಿನ ಆಡಳಿತ ಮಂಡಳಿ ಮತ್ತು ಪುರೋಹಿತರು, ಹಾಗೂ ಚೌಟ್ರಿ ಅಥವಾ ಕಲ್ಯಾಣ ಮಂಟಪಗಳಲ್ಲಿ ನಡೆದರೆ ಅದರ ಆಯೋಜಕರು ಮತ್ತು ಮಾಲೀಕರನ್ನೂ ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಹೊಣೆಗಾರರನ್ನಾಗಿ ಮಾಡಿ ಕ್ರಮ ಕೈಗೊಳ್ಳಲು ಅವಕಾಶವಿದೆ ಎಂದು ನ್ಯಾಯಾಲಯ ಎಚ್ಚರಿಸಿದೆ.
ತೀರ್ಪು: ಆರೋಪಿಗಳ ವಾದವನ್ನು ತಳ್ಳಿಹಾಕಿದ ನ್ಯಾಯಪೀಠವು, ಪ್ರಕರಣವನ್ನು ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ಅರ್ಜಿ ವಜಾಗೊಳಿಸಿದೆ. ಈ ತೀರ್ಪು ಬಾಲ್ಯವಿವಾಹವನ್ನು ಪ್ರೋತ್ಸಾಹಿಸುವವರಿಗೆ ಮತ್ತು ಮೌನವಾಗಿ ಸಹಕರಿಸುವವರಿಗೆ ದೊಡ್ಡ ಎಚ್ಚರಿಕೆಯಾಗಿದೆ.
Health Tips: ಇವು ‘ದ್ರಾಕ್ಷಿ ಸೇವನೆ’ಯ ಅದ್ಭುತ ಆರೋಗ್ಯಕರ ಪ್ರಯೋಜನಗಳು
SC, STಗೆ ಮಂಜೂರಾದ ಜಮೀನಿನ ಮೊದಲ ಮಾರಾಟ ರದ್ದಾದ್ರೆ ನಂತರದ ಎಲ್ಲಾ ವ್ಯವಹಾರಗಳು ಅಸಿಂಧು; ಹೈಕೋರ್ಟ್








