ಬೆಂಗಳೂರು: ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಉಂಟಾಗಿದ್ದ ಎಲ್‌ಪಿಜಿ ಸಿಲಿಂಡರ್ ಅಭಾವದ ಸಮಸ್ಯೆ ಸದ್ಯ ತಿಳಿಯಾಗುವ ಲಕ್ಷಣಗಳು ಕಾಣಿಸುತ್ತಿವೆ. ಕೇಂದ್ರ ಸರ್ಕಾರದ ನಿರ್ದೇಶನದಂತೆ ತೈಲ ಕಂಪನಿಗಳು ಸಿಲಿಂಡರ್ ಪೂರೈಕೆಯಲ್ಲಿ ಚುರುಕು ಮುಟ್ಟಿಸಿದ್ದು, ಕೇವಲ ಮೂರು ದಿನಗಳಲ್ಲಿ ಪೂರೈಕೆ ಪ್ರಮಾಣದಲ್ಲಿ ಶೇ. 20ರಷ್ಟು ಸುಧಾರಣೆ ಕಂಡುಬಂದಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ತಿಳಿಸಿದೆ.
ಇರಾನ್ ಯುದ್ಧದ ಭೀತಿಯಿಂದಾಗಿ ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಆದರೆ ಈಗ ಪರಿಸ್ಥಿತಿ ಸುಧಾರಿಸುತ್ತಿದೆ.
ಮಾರ್ಚ್ 12: 3.57 ಲಕ್ಷ ಎಲ್‌ಪಿಜಿ ಸಿಲಿಂಡರ್ ಪೂರೈಕೆ.
ಮಾರ್ಚ್ 14: 4.11 ಲಕ್ಷಕ್ಕೆ ಏರಿಕೆಯಾದ ಪೂರೈಕೆ.
ಮೂರು ದಿನಗಳ ಅಂತರದಲ್ಲಿ ಸುಮಾರು 54 ಸಾವಿರದಷ್ಟು ಹೆಚ್ಚಿನ ಸಿಲಿಂಡರ್ ಪೂರೈಕೆಯಾಗಿದೆ.ಒಟ್ಟಾರೆಯಾಗಿ ಮಾರ್ಚ್ 12 ರಿಂದ 14 ರ ಅವಧಿಯಲ್ಲಿ ರಾಜ್ಯಕ್ಕೆ 11,62,598 ಸಿಲಿಂಡರ್‌ಗಳನ್ನು ಪೂರೈಸಲಾಗಿದ್ದು, ಇದರಲ್ಲಿ ಗೃಹ ಬಳಕೆ, ವಾಣಿಜ್ಯ ಮತ್ತು ಆಟೋ ಎಲ್‌ಪಿಜಿ ಪೂರೈಕೆ ಸೇರಿದೆ. ಇದೇ ವೇಳೆ ಅಕ್ರಮ ದಾಸ್ತಾನು ಮತ್ತು ದುರುಪಯೋಗದ ವಿರುದ್ಧ ಕ್ರಮ ಕೈಗೊಂಡಿರುವ ಇಲಾಖೆ, ರಾಜ್ಯಾದ್ಯಂತ 514 ಸಿಲಿಂಡರ್‌ಗಳನ್ನು ಜಪ್ತಿ ಮಾಡಿದೆ.
ಜನರ ಆತಂಕ ದೂರ? ಬುಕ್ಕಿಂಗ್ ಪ್ರಮಾಣದಲ್ಲಿ ಇಳಿಕೆ
ದೇಶಾದ್ಯಂತ ಎಲ್‌ಪಿಜಿ ಕೊರತೆಯಾಗಬಹುದು ಎಂಬ ಆತಂಕದಿಂದ ಜನರು ಮುಗಿಬಿದ್ದು ಬುಕ್ಕಿಂಗ್ ಮಾಡುತ್ತಿದ್ದರು. ಆದರೆ ಈಗ ಆ ಪರಿಸ್ಥಿತಿ ಬದಲಾಗಿದೆ.
ಕೇವಲ 3 ದಿನಗಳ ಅಂತರದಲ್ಲಿ ದೇಶಾದ್ಯಂತ ಎಲ್‌ಪಿಜಿ ಬುಕ್ಕಿಂಗ್ ಪ್ರಮಾಣ 88.8 ಲಕ್ಷದಿಂದ 77 ಲಕ್ಷಕ್ಕೆ ಇಳಿಕೆಯಾಗಿದೆ. ಪೂರೈಕೆ ಸುಗಮವಾಗುತ್ತಿರುವ ಕಾರಣ ಸಾರ್ವಜನಿಕರಲ್ಲಿನ ಆತಂಕ ಕಡಿಮೆಯಾಗುತ್ತಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.








