ವಾಷಿಂಗ್ಟನ್/ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡಗಳು ಕವಿದಿರುವ ಬೆನ್ನಲ್ಲೇ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಹೇಳಿಕೆಯೊಂದು ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿದೆ. ಇರಾನ್ನ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಅವರು ಬದುಕಿಲ್ಲ, ಅಮೆರಿಕಾ-ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಟ್ರಂಪ್ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.
ಎನ್ಬಿಸಿ ನ್ಯೂಸ್ ಮತ್ತು ಫಾಕ್ಸ್ ನ್ಯೂಸ್ ರೇಡಿಯೊಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಟ್ರಂಪ್, ಮೊಜ್ತಬಾ ಖಮೇನಿ ಅವರ ಸಾವಿನ ಬಗ್ಗೆ ತಮಗೆ ಮಾಹಿತಿ ಲಭ್ಯವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.”ಮೊಜ್ತಬಾ ಖಮೇನಿ ಬದುಕಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಫೆಬ್ರವರಿ 28 ರಂದು ನಡೆದ ದಾಳಿಯ ನಂತರ ಅವರು ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಯಾರೂ ಅವರನ್ನು ತೋರಿಸಲು ಸಾಧ್ಯವಾಗುತ್ತಿಲ್ಲ ಎಂದರೆ ಅದರ ಅರ್ಥ ಅವರು ಹತರಾಗಿದ್ದಾರೆ ಎಂದೇ ಆಗಿದೆ,” ಎಂದು ಟ್ರಂಪ್ ಹೇಳಿದ್ದಾರೆ.
ಫೆಬ್ರವರಿ 28 ರಂದು ಅಮೆರಿಕಾ ಮತ್ತು ಇಸ್ರೇಲ್ ಪಡೆಗಳು ಇರಾನ್ ಮೇಲೆ ಭೀಕರ ದಾಳಿ ನಡೆಸಿದ್ದವು. ಇದೇ ದಾಳಿಯಲ್ಲಿ ಅಲಿ ಖಮೇನಿ ನಿಧನರಾಗಿದ್ದರು. ಅವರ ನಂತರ ಅಧಿಕಾರ ವಹಿಸಿಕೊಂಡಿದ್ದ ಮೊಜ್ತಬಾ ಕೂಡ ಇದೀಗ ಅದೇ ಹಾದಿ ಹಿಡಿದಿದ್ದಾರೆ ಎಂಬುದು ಟ್ರಂಪ್ ವಾದ.
ಇರಾನ್ ಸದ್ಯ ಕದನ ವಿರಾಮಕ್ಕೆ ಸಿದ್ಧವಾಗಿದೆ. ಆದರೆ, ಶತ್ರು ರಾಷ್ಟ್ರವನ್ನು ಮಟ್ಟಹಾಕುವವರೆಗೂ ಕದನ ವಿರಾಮಕ್ಕೆ ಅಮೆರಿಕಾ ಒಪ್ಪುತ್ತಿಲ್ಲ ಎಂಬ ಸುಳಿವನ್ನು ಟ್ರಂಪ್ ನೀಡಿದ್ದಾರೆ. ಇರಾನ್ನ ಪ್ರಮುಖ ತೈಲ ರಫ್ತು ಕೇಂದ್ರವಾದ ಖಾರ್ಗ್ ದ್ವೀಪದ ಮೇಲೆ ಅಮೆರಿಕಾ ಪಡೆಗಳು ನಿಖರ ದಾಳಿ ನಡೆಸಿರುವುದನ್ನು ಟ್ರಂಪ್ ದೃಢಪಡಿಸಿದ್ದಾರೆ. ಇದು ಇರಾನ್ನ ಆರ್ಥಿಕ ಬೆನ್ನೆಲಬಿಗೆ ಪೆಟ್ಟು ನೀಡಿದೆ.
ತಮ್ಮ ತಂದೆ ಅಲಿ ಖಮೇನಿ ನಿಧನದ ಬಳಿಕ ಅಧಿಕಾರಕ್ಕೇರಿದ್ದ ಮೊಜ್ತಬಾ ಖಮೇನಿ, ಅಮೆರಿಕದ ಮಿತ್ರರಾಷ್ಟ್ರಗಳ ಮೇಲೆ ಒತ್ತಡ ಹೇರುವುದಾಗಿ ಮತ್ತು ಹಾರ್ಮುಜ್ ಜಲಸಂಧಿಯ ಸಂಚಾರಕ್ಕೆ ಅಡ್ಡಿಪಡಿಸುವುದಾಗಿ ಈ ಹಿಂದೆ ಎಚ್ಚರಿಸಿದ್ದರು. ಆದರೆ, ಕಳೆದ ಎರಡು ವಾರಗಳಿಂದ ಅವರು ಎಲ್ಲಿಯೂ ಕಾಣಿಸಿಕೊಳ್ಳದಿರುವುದು ಅವರ ಆರೋಗ್ಯ ಮತ್ತು ಇರುವಿಕೆಯ ಬಗ್ಗೆ ಸಂಶಯಗಳನ್ನು ದಟ್ಟವಾಗಿಸಿದೆ. ಸದ್ಯ ಈ ಸಂಘರ್ಷವು ಮೂರನೇ ವಾರಕ್ಕೆ ಪ್ರವೇಶಿಸಿದ್ದು, ಇರಾನ್ ಸಂಧಾನಕ್ಕೆ ಮುಂದಾಗುವ ಮುನ್ಸೂಚನೆ ನೀಡಿದೆಯಾದರೂ, ಯುದ್ಧದ ತೀವ್ರತೆ ಮಾತ್ರ ಕಡಿಮೆಯಾದಂತೆ ಕಾಣುತ್ತಿಲ್ಲ.








