ಬೆಂಗಳೂರು: ರಾಜ್ಯದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯು ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಇನ್ನು ಮುಂದೆ ವಿದ್ಯಾರ್ಥಿಗಳು ಕೇವಲ ಎರಡು ವರ್ಷಗಳ ಕಾಲಾವಕಾಶದೊಳಗೆ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯವಾಗಿದೆ.
ಹೊಸ ಆದೇಶದಲ್ಲಿ ಏನಿದೆ?
ಈ ಮೊದಲು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ತಮ್ಮ ಫಲಿತಾಂಶ ಸುಧಾರಿಸಿಕೊಳ್ಳಲು ಅಥವಾ ಉತ್ತೀರ್ಣರಾಗಲು ಒಟ್ಟು 6 ಪ್ರಯತ್ನಗಳ (6 ಆರು ಬಾರಿ ಪರೀಕ್ಷೆ ಬರೆಯುವ) ಅವಕಾಶವಿತ್ತು. ಆದರೆ ರಾಜ್ಯ ಸರ್ಕಾರದ ಹೊಸ ಆದೇಶದ ಪ್ರಕಾರ, ಈ ಅವಧಿಯನ್ನು ಕೇವಲ 2 ವರ್ಷಗಳಿಗೆ ಸೀಮಿತಗೊಳಿಸಲಾಗಿದೆ.
ಯಾರಿಗೆ ಅನ್ವಯ?: ಈ ನಿಯಮವು ರೆಗ್ಯುಲರ್ (ನಿಯಮಿತ), ಖಾಸಗಿ ಮತ್ತು ಪುನರಾವರ್ತಿತ (Repeaters) ಎಲ್ಲಾ ಅಭ್ಯರ್ಥಿಗಳಿಗೂ ಅನ್ವಯವಾಗಲಿದೆ.
ಗುರಿ: ವಿದ್ಯಾರ್ಥಿಗಳು ಶೀಘ್ರವಾಗಿ ಪರೀಕ್ಷೆ ಮುಗಿಸಿ ಉನ್ನತ ವ್ಯಾಸಂಗಕ್ಕೆ ಸೇರಲಿ ಎಂಬ ಉದ್ದೇಶ ಇದರ ಹಿಂದಿದೆ ಎನ್ನಲಾಗಿದೆ.
ಬದಲಾವಣೆಗೆ ಕಾರಣವೇನು?
ಸರ್ಕಾರವು 2024-25ರಲ್ಲಿ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ವಾರ್ಷಿಕ 3 ಪರೀಕ್ಷೆಗಳ ವ್ಯವಸ್ಥೆಯನ್ನು ಜಾರಿಗೆ ತಂದಿತ್ತು. ಇದರಿಂದ ವಿದ್ಯಾರ್ಥಿಗಳಿಗೆ ಅಂಕ ಸುಧಾರಿಸಿಕೊಳ್ಳಲು ಹೆಚ್ಚಿನ ಅವಕಾಶ ಸಿಕ್ಕಂತಾಗಿತ್ತು. ಆದರೆ, ಹಿಂದಿನ ಆದೇಶದಲ್ಲಿ ವಿದ್ಯಾರ್ಥಿಗಳು ಎಷ್ಟು ಬಾರಿ ಪರೀಕ್ಷೆ ಬರೆಯಬಹುದು ಮತ್ತು ಎಷ್ಟು ಸಮಯದೊಳಗೆ ಅಂಕ ಸುಧಾರಿಸಿಕೊಳ್ಳಬೇಕು ಎಂಬ ಬಗ್ಗೆ ಸ್ಪಷ್ಟತೆ ಇರಲಿಲ್ಲ.
ಇದರಿಂದಾಗಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಗೆ ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿದ್ದವು. ಪ್ರತಿ ವರ್ಷ ಹಳೆಯ ವಿದ್ಯಾರ್ಥಿಗಳ ಮಾಹಿತಿ ಮತ್ತು ಅವರು ಈ ಹಿಂದೆ ಪಾಸ್ ಆದ ವಿಷಯಗಳ ವಿವರಗಳನ್ನು ಕಾಲೇಜು ಲಾಗಿನ್ನಲ್ಲಿ ನಿರ್ವಹಿಸುವುದು ಸವಾಲಾಗಿತ್ತು. ಈ ಹಿನ್ನೆಲೆಯಲ್ಲಿ ಈಗ 2 ವರ್ಷಗಳ ಮಿತಿಯನ್ನು ಹೇರಲಾಗಿದೆ.
ಮಿಶ್ರ ಪ್ರತಿಕ್ರಿಯೆ
ಸರ್ಕಾರದ ಈ ನಿರ್ಧಾರಕ್ಕೆ ಶಿಕ್ಷಣ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಇದು ವಿದ್ಯಾರ್ಥಿಗಳಲ್ಲಿ ಗಂಭೀರತೆಯನ್ನು ಮೂಡಿಸುತ್ತದೆ ಎಂದರೆ, ಇನ್ನು ಕೆಲವರು ಗ್ರಾಮೀಣ ಭಾಗದ ಮತ್ತು ಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ಇದು ಹೊರೆಯಾಗಬಹುದು ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.








