ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಪಾವತಿ ಮತ್ತು ಆನ್‌ಲೈನ್ ಸೇವೆಗಳು ಎಷ್ಟು ಸುಲಭವಾಗಿದೆಯೋ, ಅಷ್ಟೇ ಅಪಾಯಕಾರಿಯೂ ಆಗುತ್ತಿವೆ. ಅದರಲ್ಲೂ ವಿಶೇಷವಾಗಿ ಗ್ಯಾಸ್ ಸಿಲಿಂಡರ್ ಬುಕ್ ಮಾಡುವ ಗ್ರಾಹಕರನ್ನು ಗುರಿಯಾಗಿಸಿಕೊಂಡು ಸೈಬರ್ ವಂಚಕರು ಹೊಸ ಜಾಲ ಬೀಸಿದ್ದಾರೆ. ಪ್ರಸಿದ್ಧ ಗ್ಯಾಸ್ ಏಜೆನ್ಸಿಗಳ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ಮತ್ತು ಲಿಂಕ್‌ಗಳನ್ನು ಸೃಷ್ಟಿಸಿ ಸಾರ್ವಜನಿಕರ ಹಣಕ್ಕೆ ಕನ್ನ ಹಾಕುತ್ತಿದ್ದಾರೆ.
ಸೈಬರ್ ವಂಚಕರು ವಿವಿಧ ಏಜೆನ್ಸಿಗಳ ಹೆಸರಲ್ಲಿ ಜನರಿಗೆ ಲಿಂಕ್ ಕಳಿಸ್ತಿದ್ದಾರೆ. ಅಪ್ಪಿತಪ್ಪಿ ಆ ಲಿಂಕ್ ಮೇಲೆ ಕ್ಲಿಕ್ ಮಾಡಿದ್ರೆ ಕಥೆ ಮುಗೀತು. ಗ್ಯಾಸ್ ಬುಕ್ ಮಾಡಿಕೊಳ್ಳುವಂತೆ ಕಳಿಸಿದ ಲಿಂಕ್ ಮೂಲಕವೇ ಮೊಬೈಲ್ ಹ್ಯಾಕ್ ಮಾಡ್ತಿದ್ದಾರೆ. ಗ್ಯಾಸ್‌ಗಾಗಿ ಅಲೆದಾಡುತ್ತಿರುವವರು ಯಾಮಾರಿ ಲಿಂಕ್ ಒತ್ತಿದ್ರೆ ಗ್ಯಾಸ್ ಸಮಸ್ಯೆಯ ಜೊತೆ ಮತ್ತೊಂದು ಸಮಸ್ಯೆ ಎದುರಾಗೋದು ಫಿಕ್ಸ್ ಎನ್ನುವಂತೆ ಆಗಿದೆ.
ಇನ್ನು, ಇಂಥದ್ದೇ ಮೋಸದ ಜಾಲಕ್ಕೆ ಬಿದ್ದಿರುವ ಜನರು ಬೆಂಗಳೂರು ಪೊಲೀಸ್ ಕಂಟ್ರೋಲ್ 112ಗೆ ಕರೆ ಮಾಡಿ ವಂಚನೆಗೆ ಒಳಗಾಗಿರುವ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಪೊಲೀಸರು ಕೂಡ ಎಚ್ಚೆತ್ತಿದ್ದು, ಜನರಿಗೆ ಸೈಬರ್ ವಂಚಕರ ಬಗ್ಗೆ ಜಾಗೃತಿ ಮಾಡುವ ಕೆಲಸ ಮಾಡುತ್ತಿದ್ದಾರೆ.
ವಂಚನೆ ನಡೆಯುವುದು ಹೇಗೆ?
ವಂಚಕರು ಅಧಿಕೃತ ಗ್ಯಾಸ್ ಏಜೆನ್ಸಿಗಳ ಹೆಸರಿನಲ್ಲಿ ಗ್ರಾಹಕರಿಗೆ ಎಸ್‌ಎಂಎಸ್ (SMS) ಅಥವಾ ವಾಟ್ಸಾಪ್ ಸಂದೇಶಗಳನ್ನು ಕಳುಹಿಸುತ್ತಾರೆ. ಆ ಸಂದೇಶದಲ್ಲಿ ಒಂದು ಲಿಂಕ್ ಇರುತ್ತದೆ. ಬಳಕೆದಾರರು ಆ ಲಿಂಕ್ ಕ್ಲಿಕ್ ಮಾಡಿದ ಕೂಡಲೇ:
ಅದೊಂದು ನಕಲಿ ವೆಬ್‌ಸೈಟ್‌ಗೆ ಕರೆದೊಯ್ಯುತ್ತದೆ, ಅದು ನೋಡಲು ಅಧಿಕೃತ ಗ್ಯಾಸ್ ಕಂಪನಿಯ ಪೋರ್ಟಲ್‌ನಂತೆಯೇ ಇರುತ್ತದೆ.
ಅಲ್ಲಿ ನಿಮ್ಮ ವೈಯಕ್ತಿಕ ವಿವರಗಳು ಮತ್ತು ಬ್ಯಾಂಕ್ ಖಾತೆಯ ಮಾಹಿತಿಯನ್ನು ಕೇಳಲಾಗುತ್ತದೆ.
ಒಮ್ಮೆ ನೀವು ಮಾಹಿತಿ ನೀಡಿದ ನಂತರ, ನಿಮ್ಮ ಮೊಬೈಲ್‌ಗೆ ಬರುವ OTP (ಒನ್ ಟೈಮ್ ಪಾಸ್‌ವರ್ಡ್) ಅನ್ನು ನಮೂದಿಸಿದರೆ ಸಾಕು, ಕ್ಷಣಾರ್ಧದಲ್ಲಿ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣ ಮಾಯವಾಗುತ್ತದೆ.
ಗ್ರಾಹಕರು ಗಮನಿಸಬೇಕಾದ ಅಂಶಗಳು:
ಅಧಿಕೃತ ಮೂಲಗಳು: ಯಾವುದೇ ಗ್ಯಾಸ್ ಕಂಪನಿಗಳು (Indane, HP, Bharat Gas) ಲಿಂಕ್‌ಗಳ ಮೂಲಕ ವೈಯಕ್ತಿಕ ಬ್ಯಾಂಕಿಂಗ್ ವಿವರಗಳನ್ನು ಅಥವಾ OTP ಕೇಳುವುದಿಲ್ಲ.
ಲಿಂಕ್‌ಗಳ ಬಗ್ಗೆ ಜಾಗ್ರತೆ: ಅಪರಿಚಿತ ನಂಬರ್‌ಗಳಿಂದ ಬರುವ ಲಿಂಕ್‌ಗಳನ್ನು ಯಾವುದೇ ಕಾರಣಕ್ಕೂ ಕ್ಲಿಕ್ ಮಾಡಬೇಡಿ.
ನೇರ ಭೇಟಿ: ನಿಮ್ಮ ಕೆವೈಸಿ ಅಪ್‌ಡೇಟ್ ಮಾಡಬೇಕಿದ್ದರೆ, ನೇರವಾಗಿ ನಿಮ್ಮ ಗ್ಯಾಸ್ ವಿತರಕರ (Distributor) ಕಚೇರಿಗೆ ಭೇಟಿ ನೀಡಿ ಅಥವಾ ಅಧಿಕೃತ ಮೊಬೈಲ್ ಆಪ್‌ಗಳನ್ನು ಮಾತ್ರ ಬಳಸಿ.
ಹಣ ಕಳೆದುಕೊಂಡರೆ ಏನು ಮಾಡಬೇಕು?
ಒಂದು ವೇಳೆ ನೀವು ಇಂತಹ ವಂಚನೆಗೆ ಬಲಿಯಾದಲ್ಲಿ, ತಕ್ಷಣವೇ ಸಮಯ ವ್ಯರ್ಥ ಮಾಡದೆ ಸೈಬರ್ ಕ್ರೈಮ್ ಹೆಲ್ಪ್‌ಲೈನ್ ಸಂಖ್ಯೆ 1930 ಕ್ಕೆ ಕರೆ ಮಾಡಿ ಅಥವಾ www.cybercrime.gov.in ಪೋರ್ಟಲ್‌ನಲ್ಲಿ ದೂರು ದಾಖಲಿಸಿ.








