ನವದೆಹಲಿ: ದೀರ್ಘಕಾಲದವರೆಗೆ ಭಾರತೀಯ ಆಹಾರವೆಂದರೆ ಕೇವಲ ಮಸಾಲೆಯುಕ್ತ ಖಾದ್ಯಗಳು ಮತ್ತು ರಿಚ್ ಗ್ರೇವಿಗಳು ಎಂಬ ಭಾವನೆ ಜಗತ್ತಿನಾದ್ಯಂತ ಇತ್ತು. ಆದರೆ ಈಗ ಆ ಕಾಲ ಬದಲಾಗಿದೆ. ಭಾರತದ ವೈವಿಧ್ಯಮಯ ಅಡುಗೆ ಶೈಲಿ ಮತ್ತು ವಿಶಿಷ್ಟ ಭೋಜನದ ಅನುಭವಗಳು ಇಂದು ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆಯುತ್ತಿವೆ.
ಇದಕ್ಕೆ ಸಾಕ್ಷಿಯೆಂಬಂತೆ, ಪ್ರತಿಷ್ಠಿತ ‘ಏಷ್ಯಾಸ್ 50 ಬೆಸ್ಟ್ ರೆಸ್ಟೋರೆಂಟ್ಸ್ 2026’ ರ ವಿಸ್ತರಿತ ಪಟ್ಟಿಯಲ್ಲಿ (51–100 ಶ್ರೇಯಾಂಕ) ಭಾರತದ ನಾಲ್ಕು ರೆಸ್ಟೋರೆಂಟ್‌ಗಳು ಸ್ಥಾನ ಪಡೆದಿವೆ. ಹೊಟೇಲ್‌ಗಳು, ಬಾರ್‌ಗಳು ಮತ್ತು ರೆಸ್ಟೋರೆಂಟ್‌ಗಳನ್ನು ಗುರುತಿಸುವಲ್ಲಿ ಜಾಗತಿಕವಾಗಿ ಹೆಸರಾಗಿರುವ ’50 ಬೆಸ್ಟ್’ ಸಂಸ್ಥೆಯು ಈ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಬೆಂಗಳೂರು, ದೆಹಲಿ ಮತ್ತು ಮುಂಬೈನ ಅತ್ಯುತ್ತಮ ಡೈನಿಂಗ್ ಸ್ಪೇಸ್‌ಗಳು ಸ್ಥಾನ ಹಿಡಿದಿವೆ.
ಜಾಗತಿಕ ಮಟ್ಟದಲ್ಲಿ ಮಿಂಚಿದ ಆ ‘ನಾಲ್ಕು’ ರೆಸ್ಟೋರೆಂಟ್‌ಗಳು ಇಲ್ಲಿವೆ:
1. ಫಾರ್ಮ್‌ಲೋರ್ (Farmlore), ಬೆಂಗಳೂರು – 83ನೇ ಸ್ಥಾನ ಬೆಂಗಳೂರಿನಲ್ಲಿರುವ ಈ ರೆಸ್ಟೋರೆಂಟ್ ಭಾರತದ ಅಪರೂಪದ ‘ಫಾರ್ಮ್-ಬೇಸ್ಡ್’ ಡೈನಿಂಗ್ ಅನುಭವ ನೀಡುತ್ತದೆ. ಸ್ಥಳೀಯವಾಗಿ ಬೆಳೆದ ಕೃಷಿ ಉತ್ಪನ್ನಗಳಿಗೆ ತನ್ನದೇ ಆದ ವಿಶಿಷ್ಟ ಸ್ಪರ್ಶ ನೀಡಿ ಗ್ರಾಹಕರಿಗೆ ಉಣಬಡಿಸುವುದು ಇದರ ವಿಶೇಷತೆ. ಶೆಫ್ ಜಾನ್ಸನ್ ಎಬೆನೆಜರ್ ಮತ್ತು ಉದ್ಯಮಿ ಕೌಶಿಕ್ ರಾಜು ಅವರು ಸ್ಥಾಪಿಸಿದ ಈ ರೆಸ್ಟೋರೆಂಟ್, ಸುಸ್ಥಿರತೆ ಮತ್ತು ಕಾಲೋಚಿತ ಮೆನುಗಳಿಗೆ ಹೆಸರುವಾಸಿಯಾಗಿದೆ.
2. ಇಂಜಾ (Inja), ದೆಹಲಿ – 75ನೇ ಸ್ಥಾನ ರಾಜಧಾನಿ ದೆಹಲಿಯ ಹೃದಯಭಾಗದಲ್ಲಿರುವ ಈ ರೆಸ್ಟೋರೆಂಟ್ ಭಾರತೀಯ ಮತ್ತು ಜಪಾನಿ ಸಂಸ್ಕೃತಿಯ ಸಮ್ಮಿಶ್ರಣಕ್ಕೆ ಸಾಕ್ಷಿಯಾಗಿದೆ. ಶೆಫ್ ಅದ್ವೈತ್ ಅನಂತ್‌ವಾರ್ ಅವರ ಮಾರ್ಗದರ್ಶನದಲ್ಲಿ ಇಲ್ಲಿನ ‘ಶಿಸೊ ಲೀಫ್ ಟ್ಯೂನ’, ‘ಪೊಮೆಲೊ ಚಾಟ್’ ಮತ್ತು ‘ಲಾಬ್ಸ್ಟರ್ ರಸಂ ಚವಾನ್‌ಮುಶಿ’ಯಂತಹ ಖಾದ್ಯಗಳು ಭೋಜನ ಪ್ರಿಯರ ಮನಗೆದ್ದಿವೆ.
3. ದಿ ಟೇಬಲ್ (The Table), ಮುಂಬೈ – 73ನೇ ಸ್ಥಾನ ಮುಂಬೈ ನಿವಾಸಿಗಳ ನೆಚ್ಚಿನ ತಾಣವಾಗಿರುವ ‘ದಿ ಟೇಬಲ್’, ಜಾಗತಿಕ ಮಟ್ಟದ ವೈವಿಧ್ಯಮಯ ಖಾದ್ಯಗಳಿಗೆ ಪ್ರಸಿದ್ಧಿಯಾಗಿದೆ. ಎಲ್ಲಾ ರೀತಿಯ ರುಚಿಗಳನ್ನು ಬಯಸುವವರಿಗೆ ಇಲ್ಲಿ ಸೂಕ್ತ ಆಹಾರ ದೊರೆಯುತ್ತದೆ. ಅದರಲ್ಲೂ ಇಲ್ಲಿನ ಸಿಗ್ನೇಚರ್ ಪಾನೀಯಗಳನ್ನು ಸವಿಯುವುದೇ ಒಂದು ಸಂಭ್ರಮ.
4. ಪಾಪಾಸ್ (Papa’s), ಮುಂಬೈ – 66ನೇ ಸ್ಥಾನ ಈ ಸ್ಪರ್ಧೆಗೆ ಹೊಸದಾಗಿ ಸೇರ್ಪಡೆಗೊಂಡಿರುವ ರೆಸ್ಟೋರೆಂಟ್ ಇದು. ಇಲ್ಲಿ ಕೇವಲ 12 ಜನರಿಗೆ ಮಾತ್ರ ಕುಳಿತುಕೊಳ್ಳಲು ಅವಕಾಶವಿರುವ (Chef’s counter) ಆಪ್ತವಾದ ವಾತಾವರಣವಿದೆ. ಶೆಫ್ ಹುಸೇನ್ ಶಹಜಾದ್ ಅವರು ಭಾರತೀಯ ರುಚಿಗೆ ನೀಡುವ ‘ಪ್ಲೇಫುಲ್ ಟ್ವಿಸ್ಟ್’ ಇಲ್ಲಿನ ವಿಶೇಷ. ಈ ಮೈಕ್ರೋ-ರೆಸ್ಟೋರೆಂಟ್‌ನಲ್ಲಿ ಟೇಬಲ್ ಕಾಯ್ದಿರಿಸುವುದು ಅಷ್ಟು ಸುಲಭವಲ್ಲ!
ಮಾರ್ಚ್ 25 ರಂದು ಅಂತಿಮ ಪಟ್ಟಿ ಬಿಡುಗಡೆ
ಈಗಾಗಲೇ ಬಿಡುಗಡೆಯಾಗಿರುವ ವಿಸ್ತರಿತ ಪಟ್ಟಿಯು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಆಹಾರ ಸಂಸ್ಕೃತಿ ಬೆಳೆಯುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಇನ್ನು ಕುತೂಹಲ ಮೂಡಿಸಿರುವ ‘ಏಷ್ಯಾಸ್ 50 ಬೆಸ್ಟ್ ರೆಸ್ಟೋರೆಂಟ್ಸ್’ ನ ಅಗ್ರ 50ರ ಪಟ್ಟಿಯನ್ನು ಮಾರ್ಚ್ 25ರಂದು ಹಾಂಗ್ ಕಾಂಗ್‌ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಅನಾವರಣಗೊಳಿಸಲಾಗುವುದು.
Google Fellowship 2026: ‘ಗೂಗಲ್’ನಿಂದ ‘ಫೆಲೋಶಿಪ್’ಗೆ ಅರ್ಜಿ ಆಹ್ವಾನ; ’10 ಲಕ್ಷ ಸ್ಟೈಫಂಡ್’ ಪಡೆಯಲು ಅವಕಾಶ








