ಮಂಡ್ಯ : ಮದ್ದೂರು ನಗರದ ಕೆ.ಗುರುಶಾಂತಪ್ಪ ಸಾರ್ವಜನಿಕ ಆಸ್ಪತ್ರೆಯನ್ನು ಅಂದಾಜು 30 ಕೋಟಿ ರೂ.ವೆಚ್ಚದಲ್ಲಿ ಹೈಟೆಕ್ ಮಾದರಿಯಲ್ಲಿ ಆಧುನೀಕರಣ ಮಾಡಲು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಶೀಘ್ರದಲ್ಲೇ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ಬುಧವಾರ ಹೇಳಿದರು.
ನಗರದ ಗುರುಶಾಂತಪ್ಪ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ 2.25 ಕೋಟಿ ರೂ ಗಳ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದರು.
ಸರ್ಕಾರಿ ಆಸ್ಪತ್ರೆಯಲ್ಲಿನ ಅಗತ್ಯ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಔಷಧ ವಿತರಣಾ ಕೊಠಡಿ, ಅಡುಗೆ ಮನೆ, ಲಾಂಡ್ರಿ ಕಟ್ಟಡ, ಆವರಣ ಗೋಡೆ ಹಾಗೂ ಹೈಟೆಕ್ ಶವಾಗಾರ ಸೇರಿದಂತೆ ಇತರೆ 2.25 ಕೋಟಿ ರೂ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದರು.
ಇದನ್ನು ಸೇರಿದಂತೆ ಈಗಾಗಲೇ ಸುಮಾರು 4 ರಿಂದ 5 ಕೋಟಿ ರೂ ಗಳ ವೆಚ್ಚದಲ್ಲಿ ಕಾಮಗಾರಿಗಳು ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಅತ್ಯಾಧುನಿಕ ಶಸ್ತ್ರ ಚಿಕಿತ್ಸಾ ಕೇಂದ್ರ ಸೇರಿದಂತೆ, ವೈದ್ಯರು ಹಾಗೂ ದಾದಿಯರ ವಸತಿ ಗೃಹಗಳ ನಿರ್ಮಾಣ ಸೇರಿದಂತೆ ಹಲವಾರು ಉನ್ನತೀಕರಣ ಕಾಮಗಾರಿಗೆ 30 ಕೋಟಿ ರೂ ಅನುದಾನ ನೀಡುವಂತೆ ಆರೋಗ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಅಷ್ಟೇ ಅಲ್ಲದೇ ಸಿಬ್ಬಂದಿ ಕೊರತೆ ಸರಿಪಡಿಸಲು ಕ್ರಮವಹಿಸಲಾಗುವುದು ಎಂದ ಅವರು ಮುಂದಿನ ದಿನಗಳಲ್ಲಿ ಮದ್ದೂರಿನಲ್ಲಿ ಟ್ರಾಮಾ ಕೇರ್ ಕೇಂದ್ರವನ್ನು ಆರಂಭಿಸಲು ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ, ಇಷ್ಟರಲ್ಲೇ ತಾಲ್ಲೂಕಿಗೆ ಇನ್ನೊಂದು ಸಮುದಾಯ ಆರೋಗ್ಯ ಕೇಂದ್ರವನ್ನು ಇಲಾಖೆಯಿಂದ ದೊರಕುವ ಸಾಧ್ಯತೆಗಳಿದೆ ಎಂದು ಭರವಸೆ ನೀಡಿದರು.
ಇದೇ ವೇಳೆ ನಗರಸಭಾ ಮಾಜಿ ಅಧ್ಯಕ್ಷೆ ಕೋಕಿಲಾ ಅರುಣ್, ಮಾಜಿ ಉಪಾಧ್ಯಕ್ಷ ಟಿ,ಆರ್.ಪ್ರಸನ್ನಕುಮಾರ್, ಮಾಜಿ ಸದಸ್ಯರಾದ ಎಂ.ಬಿ.ಸಚಿನ್, ಸಿದ್ದರಾಜು, ಬಸವರಾಜು, ಮುಖಂಡರಾದ ಎಂ.ಡಿ.ಮಹಾಲಿಂಗಯ್ಯ, ಗಿರೀಶ್, ಆರಿಫ್, ಪ್ರಕಾಶ್, ವಿಜಯ್ ಕುಮಾರ್, ಸೋಮಶೇಖರ್, ಅಪ್ಪೇಗೌಡ, ಜನಾರ್ಧನ, ರಾಜೇಶ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರವಿಶಂಕರ್, ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಬಾಲಕೃಷ್ಣ ಸೇರಿದಂತೆ ಹಲವರು ಹಾಜರಿದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
ಒಂದೇ ಹೆಲಿಕಾಪ್ಟರ್‌ನಿಂದ ಎರಡು ಕ್ಷಿಪಣಿ: ಭಾರತದ ಮೊದಲ ‘ಸಾಲ್ವೋ’ ಉಡಾವಣೆ ಸಕ್ಸಸ್
ಬೆಂಗಳೂರಲ್ಲಿ ವರುಣನ ಆರ್ಭಟಕ್ಕೆ ಕಾಂಪೌಂಡ್ ಕುಸಿದು 7 ಮಂದಿ ಬಲಿ; ಮೃತರ ಕುಟುಂಬಕ್ಕೆ ತಲಾ ₹5 ಲಕ್ಷ ಪರಿಹಾರ ಘೋಷಣೆ








