ಪುಣೆ: ಟಿ20 ವಿಶ್ವಕಪ್ ಗೆಲುವಿನ ಸಂಭ್ರಮದಲ್ಲಿದ್ದ ಸ್ಟಾರ್ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಈಗ ಕಾನೂನು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದ ಗೆಲುವಿನ ಬಳಿಕ ಮೈದಾನದಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ವಕೀಲರೊಬ್ಬರು ದೂರು ನೀಡಿದ್ದಾರೆ.
ದೂರಿನ ವಿವರ:
ಪುಣೆ ಮೂಲದ ವಕೀಲ ವಾಜಿದ್ ಖಾನ್ ಬಿಡ್ಕರ್ ಅವರು ಬೆಂಗಳೂರಿನ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಿಸಿದ್ದಾರೆ. 2026ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಗೆಲುವಿನ ನಂತರ ಮೈದಾನದಲ್ಲಿ ಸಂಭ್ರಮಿಸುವಾಗ ಪಾಂಡ್ಯ ಅವರು ರಾಷ್ಟ್ರಧ್ವಜದ ಘನತೆಗೆ ಧಕ್ಕೆ ತಂದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಏನಿದು ವಿವಾದ?
ಧ್ವಜದೊಂದಿಗೆ ಅಸಭ್ಯ ವರ್ತನೆ: ಮೈದಾನದಲ್ಲಿ ಸಂಭ್ರಮಿಸುವ ವೇಳೆ ಹಾರ್ದಿಕ್ ಪಾಂಡ್ಯ ಅವರು ರಾಷ್ಟ್ರಧ್ವಜವನ್ನು ತಮ್ಮ ಬೆನ್ನಿಗೆ ಅಥವಾ ಮೈಗೆ ಸುತ್ಕಕೊಂಡು ತಮ್ಮ ಗೆಳತಿ ಮಹಿಕಾ ಶರ್ಮಾ ಅವರೊಂದಿಗೆ ಮೈದಾನದ ವೇದಿಕೆಯ ಮೇಲೆ ಮಲಗಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ವಕೀಲರು ಆರೋಪಿಸಿದ್ದಾರೆ.
ಕಾನೂನು ಉಲ್ಲಂಘನೆ: ಈ ಕೃತ್ಯವು 1971ರ ‘ರಾಷ್ಟ್ರ ಗೌರವಕ್ಕೆ ಅವಮಾನ ತಡೆ ಕಾಯ್ದೆ’ಯ (Prevention of Insults to National Honour Act) ಸೆಕ್ಷನ್ 2ರ ಉಲ್ಲಂಘನೆಯಾಗಿದೆ. ರಾಷ್ಟ್ರಧ್ವಜವು ದೇಶದ ಸಂಕೇತವಾಗಿದ್ದು, ಅದನ್ನು ಮೈಮೇಲೆ ಧರಿಸಿ ಮೈದಾನದಲ್ಲಿ ಮಲಗುವುದು ಸರಿಯಲ್ಲ ಎಂಬುದು ದೂರುದಾರರ ವಾದ.
ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ: ಪಾಂಡ್ಯ ಮತ್ತು ಅವರ ಗೆಳತಿ ಮೈದಾನದಲ್ಲಿ ಮಲಗಿರುವ ವೀಡಿಯೊಗಳು ವೈರಲ್ ಆಗಿದ್ದು, ಅನೇಕ ನೆಟ್ಟಿಗರು ಕೂಡ “ವಿಜಯದ ಅಮಲಿನಲ್ಲಿ ಸಿವಿಕ್ ಸೆನ್ಸ್ ಮರೆತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸರ ಪ್ರತಿಕ್ರಿಯೆ:
ಘಟನೆ ನಡೆದಿದ್ದು ಅಹಮದಾಬಾದ್‌ನಲ್ಲಿ ಆದರೂ, ರಾಷ್ಟ್ರಧ್ವಜವು ಇಡೀ ದೇಶದ ಸಂಕೇತವಾಗಿರುವುದರಿಂದ ಬೆಂಗಳೂರಿನಲ್ಲಿ ದೂರು ನೀಡಲಾಗಿದೆ ಎಂದು ವಕೀಲರು ತಿಳಿಸಿದ್ದಾರೆ. ಶಿವಾಜಿನಗರ ಪೊಲೀಸರು ಸದ್ಯ ದೂರು ಅರ್ಜಿಯನ್ನು ಸ್ವೀಕರಿಸಿದ್ದು, ಈ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.








