ನವದೆಹಲಿ : ಹಾರ್ಮುಜ್ ಜಲಸಂಧಿಯಲ್ಲಿ ಥಾಯ್ ವಾಣಿಜ್ಯ ಹಡಗು “ಮಯೂರಿ ನಾರಿ” ಮೇಲೆ ನಡೆದ ದಾಳಿಯ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ. ದಾಳಿಯನ್ನು ಖಂಡಿಸಿ ವಿದೇಶಾಂಗ ಸಚಿವಾಲಯ ಹೇಳಿಕೆ ನೀಡಿದೆ. ಹಡಗು ಭಾರತದ ಕಾಂಡ್ಲಾ ಬಂದರನ್ನು ಸಮೀಪಿಸುತ್ತಿತ್ತು. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಮಧ್ಯೆ ವಾಣಿಜ್ಯ ಹಡಗುಗಳನ್ನು ಗುರಿಯಾಗಿಸಿಕೊಂಡಿರುವುದು ತೀವ್ರ ಕಳವಳಕಾರಿ ಎಂದು ಭಾರತ ಹೇಳಿದೆ.
ಈ ದಾಳಿಗಳು ಈಗಾಗಲೇ ಭಾರತೀಯ ನಾಗರಿಕರು ಸೇರಿದಂತೆ ಅನೇಕ ಮುಗ್ಧ ಜನರ ಜೀವವನ್ನು ಬಲಿ ಪಡೆದಿವೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ಈ ದಾಳಿಗಳು ಹೆಚ್ಚು ಅಪಾಯಕಾರಿಯಾಗುತ್ತಿರುವುದು ಕಳವಳಕಾರಿಯಾಗಿದೆ. ಸಮುದ್ರದಲ್ಲಿ ಸಾಗಾಟ ಸಂಪೂರ್ಣವಾಗಿ ಸುರಕ್ಷಿತ ಮತ್ತು ಮುಕ್ತವಾಗಿರಬೇಕು. ವಾಣಿಜ್ಯ ಹಡಗುಗಳನ್ನು ತಡೆಯುವ ಅಥವಾ ಯುದ್ಧದಲ್ಲಿ ಅವುಗಳನ್ನು ಗುರಿಯಾಗಿಸುವ ಯಾವುದೇ ಪ್ರಯತ್ನ ತಪ್ಪು ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.








