ಬೆಂಗಳೂರು: ತಮಿಳುನಾಡಿನ ಮಧುರೈ ವಿಮಾನ ನಿಲ್ದಾಣವನ್ನು ‘ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ ಎಂದು ಘೋಷಿಸಿರುವ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ನಿರ್ಧಾರವು, ಕರ್ನಾಟಕದ ಹುಬ್ಬಳ್ಳಿ ಮತ್ತು ಬೆಳಗಾವಿ ವಿಮಾನ ನಿಲ್ದಾಣಗಳ ವಿಷಯದಲ್ಲಿ ತೋರುತ್ತಿರುವ ತಾರತಮ್ಯ ನೀತಿಗೆ ಸಾಕ್ಷಿಯಾಗಿದೆ. ನೆರೆಯ ರಾಜ್ಯಕ್ಕೆ ‘ಬೆಣ್ಣೆ’, ನಮಗೆ ‘ಸುಣ್ಣ’ ಎನ್ನುವ ಕೇಂದ್ರದ ಈ ಧೋರಣೆ ಸರ್ವಥಾ ಸರಿಯಲ್ಲ ಎಂಬುದಾಗಿ ಸಚಿವ ಎಂ.ಬಿ ಪಾಟೀಲ್ ಕಿಡಿ ಕಾರಿದ್ದಾರೆ.
ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ತಮಿಳುನಾಡು ಚುನಾವಣೆಯ ಮೇಲೆ ಕಣ್ಣಿಟ್ಟು ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿರಬಹುದು. ಆದರೆ, ನಮ್ಮ ರಾಜ್ಯದ ಬೇಡಿಕೆಯ ಬಗ್ಗೆ ಕೇಂದ್ರವು ಪ್ರದರ್ಶಿಸುತ್ತಿರುವ ಉದಾಸೀನ ಮನೋಭಾವವು ಪ್ರಶ್ನಾರ್ಹವಾಗಿದೆ ಎಂದಿದ್ದಾರೆ.
ಉತ್ತರ ಕರ್ನಾಟಕದ ಆರ್ಥಿಕ ಪ್ರಗತಿಯ ದೃಷ್ಟಿಯಿಂದ ಹುಬ್ಬಳ್ಳಿ ಮತ್ತು ಬೆಳಗಾವಿ ವಿಮಾನ ನಿಲ್ದಾಣಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸುವವಂತೆ ಕೋರಿ 24 ಜೂನ್ 2025 ರಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವರಾದ ಕೆ. ರಾಮಮೋಹನ್ ನಾಯ್ಡು ಅವರಿಗೆ ಪತ್ರ ಬರೆದು ಮನವಿ ಮಾಡಲಾಗಿತ್ತು. ಇಷ್ಟಾಗಿಯೂ ರಾಜ್ಯದ ಬೇಡಿಕೆಯನ್ನು ನಿರ್ಲಕ್ಷಿಸಿರುವುದು ಖೇದಕರ ಎಂದು ಹೇಳಿದ್ದಾರೆ.
ಈಗಲಾದರೂ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಬೆಳಗಾವಿ ಸಂಸದರಾದ ಜಗದೀಶ್ ಶೆಟ್ಟರ್ ಮತ್ತು ಹಾವೇರಿ ಸಂಸದರಾದ ಶ್ರೀ ಬಸವರಾಜ ಬೊಮ್ಮಾಯಿ ಅವರು ಒಗ್ಗಟ್ಟಾಗಿ ಧ್ವನಿ ಎತ್ತಿ, ರಾಜ್ಯದ ಹಿತಾಸಕ್ತಿಯ ಪರ ನಿಲ್ಲಬೇಕಿದೆ ಅಂತ ತಿಳಿಸಿದ್ದಾರೆ.
ಹುಬ್ಬಳ್ಳಿ ಅಥವಾ ಬೆಳಗಾವಿ ಎರಡರಲ್ಲಿ ಒಂದನ್ನಾದರೂ ತಕ್ಷಣವೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೆಂದು ಘೋಷಿಸಬೇಕು. ಎರಡನ್ನೂ ಉನ್ನತೀಕರಿಸಿದರೆ ಅದು ರಾಜ್ಯದ ಅಭಿವೃದ್ಧಿಗೆ ದೊಡ್ಡ ಬಲ ನೀಡಲಿದೆ. ಕೇಂದ್ರ ಸರ್ಕಾರವು ಕೂಡಲೇ ಕರ್ನಾಟಕದ ಅಗತ್ಯವನ್ನು ಮನಗಾಣಬೇಕು ಎಂದು ಹೇಳಿದ್ದಾರೆ.
ಕೇಂದ್ರದ ದ್ವಂದ್ವ ನೀತಿ: ತಮಿಳುನಾಡಿಗೆ ಬೆಣ್ಣೆ, ಕರ್ನಾಟಕಕ್ಕೆ ಸುಣ್ಣ!
ತಮಿಳುನಾಡಿನ ಮಧುರೈ ವಿಮಾನ ನಿಲ್ದಾಣವನ್ನು 'ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ' ಎಂದು ಘೋಷಿಸಿರುವ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ನಿರ್ಧಾರವು, ಕರ್ನಾಟಕದ ಹುಬ್ಬಳ್ಳಿ ಮತ್ತು ಬೆಳಗಾವಿ ವಿಮಾನ ನಿಲ್ದಾಣಗಳ ವಿಷಯದಲ್ಲಿ ತೋರುತ್ತಿರುವ ತಾರತಮ್ಯ ನೀತಿಗೆ… pic.twitter.com/LRX7dzjzfg
— M B Patil (@MBPatil) March 11, 2026








