ಸಮಸ್ತಿಪುರ: ಅಮ್ಮ ಎಂದರೆ ಕೇವಲ ಪ್ರೀತಿ-ವಾತ್ಸಲ್ಯದ ಗಣಿ ಮಾತ್ರವಲ್ಲ, ಅವಶ್ಯಕತೆ ಬಿದ್ದರೆ ಸಾವು ಎದುರಾದರೂ ತನ್ನ ಮಕ್ಕಳಿಗಾಗಿ ಯಮನೊಂದಿಗೂ ಹೋರಾಡುವ ಸಾಕ್ಷಾತ್ ಶಕ್ತಿ ಸ್ವರೂಪಿಣಿ ಎಂಬುದನ್ನು ಈ ಘಟನೆ ಮತ್ತೊಮ್ಮೆ ಸಾಬೀತುಪಡಿಸಿದೆ.
ತನ್ನ ಕಣ್ಣೆದುರೇ ಯಮನಂತೆ ಧಾವಿಸಿ ಬರುತ್ತಿದ್ದ ರೈಲನ್ನು ಕಂಡು ಎದೆಗುಂದದ ತಾಯಿಯೊಬ್ಬಳು, ತನ್ನಿಬ್ಬರು ಮಕ್ಕಳನ್ನು ಎದೆಗೆ ಕಚ್ಚಿ ಹಿಡಿದು ಪ್ರಾಣಾಪಾಯದಿಂದ ಪಾರುಮಾಡಿರುವ ರೋಮಾಂಚನಕಾರಿ ಘಟನೆ ಬಿಹಾರದ ಸಮಸ್ತಿಪುರ ಜಿಲ್ಲೆಯಲ್ಲಿ ನಡೆದಿದೆ. ನೆಟ್ಟಿಗರ ಮೈಮನ ಜುಂ ಎನಿಸುತ್ತಿರುವ ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಘಟನೆಯ ಹಿನ್ನೆಲೆ:
ಸಮಸ್ತಿಪುರ ಜಿಲ್ಲೆಯ ಶಾಪುರ್ ಪಟೋರಿ ರೈಲ್ವೆ ನಿಲ್ದಾಣದಲ್ಲಿ ಮೂವರು ಮಹಿಳೆಯರು ತಮ್ಮಿಬ್ಬರು ಮಕ್ಕಳೊಂದಿಗೆ ರೈಲ್ವೆ ಹಳಿ ದಾಟುತ್ತಿದ್ದರು. ದುರದೃಷ್ಟವಶಾತ್, ಅವರು ಹಳಿ ದಾಟುತ್ತಿದ್ದ ಅದೇ ಸಮಯಕ್ಕೆ ತೀವ್ರ ವೇಗದಲ್ಲಿ ಎಕ್ಸ್ಪ್ರೆಸ್ ರೈಲೊಂದು ಅದೇ ಟ್ರ್ಯಾಕ್ಗೆ ಧಾವಿಸಿ ಬಂದಿದೆ. ಪ್ಲಾಟ್ಫಾರ್ಮ್ ಏರುವಷ್ಟರಲ್ಲಿ ರೈಲು ಅತ್ಯಂತ ಹತ್ತಿರ ಬಂದಿದ್ದರಿಂದ ಗಾಬರಿಗೊಂಡ ಮಹಿಳೆಯರು, ಪ್ಲಾಟ್ಫಾರ್ಮ್ ಹಾಗೂ ಹಳಿಯ ಪಕ್ಕದಲ್ಲಿದ್ದ ಅತ್ಯಂತ ಕಿರಿದಾದ ಜಾಗದಲ್ಲಿ (ಗ್ಯಾಪ್) ಅಡಗಿ ಕುಳಿತಿದ್ದಾರೆ.
ಮಕ್ಕಳಿಗಾಗಿ ಪ್ರಾಣ ಪಣಕ್ಕಿಟ್ಟ ತಾಯಿ:
ರೈಲು ಅತ್ಯಂತ ವೇಗವಾಗಿ ಚಲಿಸುತ್ತಿದ್ದಾಗ ಉಂಟಾದ ಭೀಕರ ಶಬ್ದ ಮತ್ತು ಕಂಪನಕ್ಕೆ ಮಕ್ಕಳು ಹೆದರಿ ಹೊರಗೆ ಓಡಿಬರಬಾರದೆಂದು, ಆ ತಾಯಿ ತನ್ನಿಬ್ಬರು ಮಕ್ಕಳನ್ನು ಗಟ್ಟಿಯಾಗಿ ಅಪ್ಪಿ ಹಿಡಿದು ಹಳಿಯ ಪಕ್ಕದಲ್ಲೇ ಮಲಗಿಕೊಂಡಿದ್ದಾಳೆ. ರೈಲಿನ ಎಲ್ಲಾ ಬೋಗಿಗಳು ಹಾದುಹೋಗುವವರೆಗೂ ಆಕೆ ಕಣ್ಮುಚ್ಚಿ ಮಕ್ಕಳನ್ನು ತನ್ನ ದೇಹದ ಕೆಳಗೆ ರಕ್ಷಿಸಿಕೊಂಡಿದ್ದಾಳೆ.
ಈ ಭೀಕರ ದೃಶ್ಯವನ್ನು ಪ್ಲಾಟ್ಫಾರ್ಮ್ ಮೇಲಿಂದ ನೋಡುತ್ತಿದ್ದ ಇತರ ಪ್ರಯಾಣಿಕರು ಧೃತಿಗೆಟ್ಟು, ಆತಂಕದಿಂದ ಉಸಿರು ಬಿಗಿಹಿಡಿದು ನಿಂತಿದ್ದರು. ರೈಲು ಸಂಪೂರ್ಣವಾಗಿ ಹಾದುಹೋದ ನಂತರ, ತಾಯಿ ಮತ್ತು ಮಕ್ಕಳು ಸೇರಿದಂತೆ ಎಲ್ಲರೂ ಸುರಕ್ಷಿತವಾಗಿ ಹೊರಬಂದಾಗ ಅಕ್ಕಪಕ್ಕದವರು ನಿರಾಳರಾಗಿ ನಿಟ್ಟುಸಿರು ಬಿಟ್ಟರು. ಈ ಘಟನೆಯಲ್ಲಿ ಓರ್ವ ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ.
ಅಧಿಕಾರಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ:
ಈ ರೋಮಾಂಚನಕಾರಿ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ತಾಯಿಯ ಸಾಹಸ ಮತ್ತು ಧೈರ್ಯಕ್ಕೆ ನೆಟ್ಟಿಗರು ಜೈಕಾರ ಹಾಕುತ್ತಿದ್ದಾರೆ. “ಅಮ್ಮನಿಗಿಂತ ದೊಡ್ಡ ಯೋಧ ಜಗತ್ತಿನಲ್ಲಿ ಯಾರೂ ಇಲ್ಲ” ಎಂದು ಕಮೆಂಟ್ ಮಾಡುತ್ತಿದ್ದಾರೆ.
ಆದರೆ, ಇದೇ ವೇಳೆ ರೈಲ್ವೆ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಿಲ್ದಾಣದಲ್ಲಿ ಹಳಿ ದಾಟಲು ಪಾದಚಾರಿ ಮೇಲ್ಸೇತುವೆ (Foot Over Bridge) ಸೌಲಭ್ಯ ಇಲ್ಲದಿರುವುದೇ ಇಂತಹ ಪ್ರಾಣಸಂಕಟಕ್ಕೆ ಕಾರಣ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
SHOCKING VISUALS 🚨
A mother in Bihar risked her own life to save her two children after a train suddenly arrived while they were crossing the tracks near Shahpur Patori railway station.
According to reports, the three women quickly sat down with the children pressed beneath… pic.twitter.com/JCEdu5R9Y3
— Megh Updates 🚨™ (@MeghUpdates) May 15, 2026








