ಬೆಳಗಾವಿ: ಅಸಹಾಯಕ ಅಂಗವಿಕಲ ಹಾಗೂ ಬುದ್ಧಿಮಾಂದ್ಯ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಗೆ ಬೆಳಗಾವಿಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು (ಫಾಸ್ಟ್‌ಟ್ರ್ಯಾಕ್ ಪೋಕ್ಸೋ ಕೋರ್ಟ್) 40 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ಒಟ್ಟು 1.50 ಲಕ್ಷ ರೂಪಾಯಿ ದಂಡ ವಿಧಿಸಿ ಐತಿಹಾಸಿಕ ತೀರ್ಪು ನೀಡಿದೆ.
ಪ್ರಕರಣದ ಹಿನ್ನೆಲೆ:
ದಿನಾಂಕ 25-08-2025 ರಂದು ಹುಕ್ಕೇರಿ ತಾಲೂಕಿನ ಕರಜಗಾ ಗ್ರಾಮದ ನಿವಾಸಿ ಧರೇಪ್ಪ @ ಧೀರಜ ಅಂಗತ ಬಿನಸೆ (25 ವರ್ಷ) ಎಂಬಾತ, ಬಾಲಕಿಯ ಪೋಷಕರು ಕೆಲಸಕ್ಕೆ ಹೋಗಿದ್ದ ಸಮಯ ಸಾಧಿಸಿ, ಪರಿಶಿಷ್ಟ ಜಾತಿಗೆ ಸೇರಿದ ಬುದ್ಧಿಮಾಂದ್ಯ ಅಪ್ರಾಪ್ತ ಬಾಲಕಿಯನ್ನು ಎಳೆದುಕೊಂಡು ಹೋಗಿ ಬಲವಂತವಾಗಿ ಅತ್ಯಾಚಾರ ಎಸಗಿದ್ದನು. ಈ ಬಗ್ಗೆ ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಹಾಗೂ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
ಕೇವಲ 4 ತಿಂಗಳಲ್ಲಿ ತೀರ್ಪು:
ಈ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಬೆಳಗಾವಿ ಡಿಸಿಆರ್‌ಇ ಪೊಲೀಸ್ ನಿರೀಕ್ಷಕರಾದ ಶ್ರೀ ಮಹಾಂತೇಶ ವಿ. ಹೊಸಪೇಟೆ ಅವರು ಕ್ಷಿಪ್ರವಾಗಿ ತನಿಖೆ ನಡೆಸಿ, ಭದ್ರ ಸಾಕ್ಷ್ಯಾಧಾರಗಳೊಂದಿಗೆ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯವು ಕೇವಲ 4 ತಿಂಗಳು 7 ದಿನಗಳಲ್ಲಿ ವಿಚಾರಣೆ ಪೂರ್ಣಗೊಳಿಸಿ ಈ ಮಹತ್ವದ ತೀರ್ಪು ಪ್ರಕಟಿಸಿದೆ.
ಶಿಕ್ಷೆಯ ವಿವರ:
-
ಪೋಕ್ಸೋ ಕಾಯ್ದೆ ಅಡಿ: 30 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 1 ಲಕ್ಷ ರೂಪಾಯಿ ದಂಡ.
-
ಎಸ್‌ಸಿ/ಎಸ್‌ಟಿ ಕಾಯ್ದೆ ಅಡಿ: 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 50 ಸಾವಿರ ರೂಪಾಯಿ ದಂಡ.
-
ಒಟ್ಟಾರೆಯಾಗಿ ಆರೋಪಿ 40 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಬೇಕಿದೆ.
ಶ್ಲಾಘನೀಯ ಕಾರ್ಯ:
ಸರ್ಕಾರದ ಪರವಾಗಿ ಸಮರ್ಥವಾಗಿ ವಾದ ಮಂಡಿಸಿದ ವಿಶೇಷ ಸರ್ಕಾರಿ ಅಭಿಯೋಜಕರಾದ ಶ್ರೀ ಎಲ್. ಎ. ಪಾಟೀಲ ಮತ್ತು ತನಿಖಾಧಿಕಾರಿ ಶ್ರೀ ಮಹಾಂತೇಶ ವಿ. ಹೊಸಪೇಟೆ ಅವರ ಕಾರ್ಯವನ್ನು ನ್ಯಾಯಾಲಯ ಮತ್ತು ಪೊಲೀಸ್ ಇಲಾಖೆ ಪ್ರಶಂಸಿಸಿದೆ. ಅಸಹಾಯಕ ಬಾಲಕಿಗೆ ನ್ಯಾಯ ಕೊಡಿಸುವಲ್ಲಿ ಇವರ ಪಾತ್ರ ಪ್ರಮುಖವಾಗಿದೆ.
ನೀವು ‘SSLC ಪಾಸ್’ ಆಗಿದ್ದೀರಾ? 412 ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ
ನೀವು ‘SSLC ಪಾಸ್’ ಆಗಿದ್ದೀರಾ? 412 ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ








