ಚಂಡೀಗಢ : ಪತ್ರಕರ್ತ ರಾಮ್ ಚಂದರ್ ಛತ್ರಪತಿ ಅವರ ಹತ್ಯೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್‌ಗೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಶನಿವಾರ (ಮಾರ್ಚ್ 7) ಬಿಗ್ ರಿಲೀಫ್ ನೀಡಿದ್ದು, ಆತನನ್ನು ಪ್ರಕರಣದಿಂದ ದೋಷಮುಕ್ತಗೊಳಿಸಿ (Acquit) ತೀರ್ಪು ನೀಡಿದೆ.
2002ರಲ್ಲಿ ನಡೆದಿದ್ದ ಈ ಹತ್ಯೆ ಪ್ರಕರಣದಲ್ಲಿ, ಪಂಚಕುಲದ ಸಿಬಿಐ ವಿಶೇಷ ನ್ಯಾಯಾಲಯವು 2019ರಲ್ಲಿ ಗುರ್ಮೀತ್ ರಾಮ್ ರಹೀಮ್‌ನನ್ನು ದೋಷಿ ಎಂದು ತೀರ್ಮಾನಿಸಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಆತ ಹೈಕೋರ್ಟ್ ಮೆಟ್ಟಿಲೇರಿದ್ದ. ಮೇಲ್ಮನವಿಯ ವಿಚಾರಣೆ ನಡೆಸಿದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಶೀಲ್ ನಾಗು ಹಾಗೂ ನ್ಯಾಯಮೂರ್ತಿ ವಿಕ್ರಮ್ ಅಗರ್‌ವಾಲ್ ಅವರ ನೇತೃತ್ವದ ವಿಭಾಗೀಯ ಪೀಠವು, ಸಿಬಿಐ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿ ಗುರ್ಮೀತ್‌ಗೆ ಕ್ಲೀನ್ ಚಿಟ್ ನೀಡಿದೆ.
ಆದರೆ, ಇದೇ ಪ್ರಕರಣದಲ್ಲಿ ಭಾಗಿಯಾಗಿದ್ದ ಇತರ ಇಬ್ಬರು ಆರೋಪಿಗಳು ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ವಜಾಗೊಳಿಸಿದ್ದು, ಅವರ ಮೇಲಿನ ಆರೋಪಗಳನ್ನು ಹಾಗೂ ಶಿಕ್ಷೆಯನ್ನು ಎತ್ತಿಹಿಡಿದಿದೆ.
ಪ್ರಕರಣದ ಹಿನ್ನೆಲೆ ಏನು?
2002ರ ಅಕ್ಟೋಬರ್‌ನಲ್ಲಿ ಹರಿಯಾಣದ ಸಿರ್ಸಾದಲ್ಲಿ ‘ಪೂರಾ ಸಚ್’ ಎಂಬ ಸ್ಥಳೀಯ ಪತ್ರಿಕೆಯ ಸಂಪಾದಕರಾಗಿದ್ದ ರಾಮ್ ಚಂದರ್ ಛತ್ರಪತಿ ಅವರನ್ನು ಅವರ ನಿವಾಸದ ಮುಂದೆಯೇ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಡೇರಾ ಸಚ್ಚಾ ಸೌದಾ ಆಶ್ರಮದಲ್ಲಿ ಮಹಿಳಾ ಅನುಯಾಯಿಗಳ (ಸಾಧ್ವಿಗಳ) ಮೇಲೆ ಗುರ್ಮೀತ್ ರಾಮ್ ರಹೀಮ್ ನಡೆಸುತ್ತಿದ್ದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಬಂದಿದ್ದ ಅನಾಮಧೇಯ ಪತ್ರವೊಂದನ್ನು ಛತ್ರಪತಿ ಅವರು ತಮ್ಮ ಪತ್ರಿಕೆಯಲ್ಲಿ ಧೈರ್ಯವಾಗಿ ಪ್ರಕಟಿಸಿದ್ದರು. ಈ ವರದಿಯಿಂದ ರೊಚ್ಚಿಗೆದ್ದು ಅವರ ಹತ್ಯೆ ಮಾಡಿಸಲಾಗಿತ್ತು.
ಛತ್ರಪತಿ ಅವರ ಪುತ್ರನ ಸುದೀರ್ಘ ಕಾನೂನು ಹೋರಾಟದ ನಂತರ, ಸಿಬಿಐ ತನಿಖೆ ನಡೆಸಿ 2019ರಲ್ಲಿ ರಾಮ್ ರಹೀಮ್‌ಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿತ್ತು. ಇದೀಗ ಹೈಕೋರ್ಟ್ ಈ ಹತ್ಯೆ ಪ್ರಕರಣದಿಂದ ಆತನನ್ನು ಖುಲಾಸೆಗೊಳಿಸಿದೆ.








