ಬೆಂಗಳೂರು: ‘ಬ್ರ್ಯಾಂಡ್ ಕರ್ನಾಟಕ’ (Brand Karnataka) ಕಾರ್ಯಕ್ರಮದ ಅಡಿ ಮಹಿಳಾ ನೇತೃತ್ವದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿಗೆ (MSME) ವಿಶೇಷ ಆದ್ಯತೆ ನೀಡಲಾಗುವುದು. ಸುಮಾರು 4,000 ಉದ್ದಿಮೆಗಳಿಗೆ ಬ್ರ್ಯಾಂಡಿಂಗ್, ಉತ್ಪನ್ನಗಳ ಸ್ಥಾನೀಕರಣ (Product positioning), ಗುಣಮಟ್ಟದ ಪ್ರಮಾಣೀಕರಣ ಮತ್ತು ಮಾರುಕಟ್ಟೆ ಪ್ರವೇಶಕ್ಕೆ ಅಗತ್ಯ ಬೆಂಬಲ ನೀಡಲಾಗುವುದು ಎಂದು ವಾಣಿಜ್ಯ ಮತ್ತು ಕೈಗಾರಿಕೆ (ಎಂಎಸ್‌ಎಂಇ, ಗಣಿ, ಜವಳಿ ಮತ್ತು ಸಕ್ಕರೆ) ಇಲಾಖೆಯ ಕಾರ್ಯದರ್ಶಿಗಳಾದ ರೋಹಿಣಿ ಸಿಂಧೂರಿ ತಿಳಿಸಿದರು.
ನಗರದಲ್ಲಿ ‘ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ’ (FKCCI) ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದೇಶೀಯ, ಅಂತರರಾಷ್ಟ್ರೀಯ ಮಾರುಕಟ್ಟೆಗಳು ಹಾಗೂ ಇ-ಕಾಮರ್ಸ್ ವೇದಿಕೆಗಳಲ್ಲಿ ಸ್ಥಳೀಯ ಉದ್ದಿಮೆಗಳು ಬೆಳೆಯಲು ಮತ್ತು ಜಾಗತಿಕ ಮಟ್ಟದಲ್ಲಿ ಕರ್ನಾಟಕದ ಉತ್ಪನ್ನಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಈ ಉಪಕ್ರಮವು ಗುರಿ ಹೊಂದಿದೆ ಎಂದು ಅವರು ವಿವರಿಸಿದರು.
ರಾಜ್ಯದ ಬೆನ್ನೆಲುಬು ಎಂಎಸ್‌ಎಂಇ ವಲಯ:
“ರಾಜ್ಯದಲ್ಲಿ ಸುಮಾರು 25 ಲಕ್ಷ ಎಂಎಸ್‌ಎಂಇಗಳಿದ್ದು, ಇವು ರಾಜ್ಯದ ಕೈಗಾರಿಕಾ ಮತ್ತು ಉದ್ಯೋಗ ಸೃಷ್ಟಿ ವ್ಯವಸ್ಥೆಯ ಬೆನ್ನೆಲುಬಾಗಿವೆ. ಇದರಲ್ಲಿ ಶೇ. 25 ರಷ್ಟು ಉದ್ದಿಮೆಗಳನ್ನು ಮಹಿಳೆಯರೇ ಮುನ್ನಡೆಸುತ್ತಿರುವುದು ಆರ್ಥಿಕ ಚಟುವಟಿಕೆಗಳಲ್ಲಿ ಮಹಿಳಾ ಉದ್ಯಮಿಗಳ ಬೆಳೆಯುತ್ತಿರುವ ಪಾತ್ರವನ್ನು ಎತ್ತಿ ತೋರಿಸುತ್ತದೆ,” ಎಂದರು.
ಉತ್ಪನ್ನಗಳ ಗುಣಮಟ್ಟ ಸುಧಾರಣೆ, ಬ್ರ್ಯಾಂಡಿಂಗ್ ಬಲಪಡಿಸುವಿಕೆ ಮತ್ತು ಮಾರುಕಟ್ಟೆ ವಿಸ್ತರಣೆಗೆ ‘ಬ್ರ್ಯಾಂಡ್ ಕರ್ನಾಟಕ’ ಕಾರ್ಯಕ್ರಮವು ಎಂಎಸ್‌ಎಂಇಗಳಿಗೆ ವ್ಯವಸ್ಥಿತ ಬೆಂಬಲವನ್ನು ಒದಗಿಸಲಿದೆ. ಈ ಉಪಕ್ರಮವು ರಾಜ್ಯದ ‘ಒಂದು ಜಿಲ್ಲೆ, ಒಂದು ಉತ್ಪನ್ನ’ (ODOP) ಚೌಕಟ್ಟಿನೊಂದಿಗೆ ಸಹಯೋಗ ಹೊಂದಿದ್ದು, ಪ್ರಾದೇಶಿಕ ಉತ್ಪನ್ನಗಳನ್ನು ಉತ್ತೇಜಿಸಲು ಹಾಗೂ ಮಾರುಕಟ್ಟೆ ವ್ಯಾಪ್ತಿಯನ್ನು ವಿಸ್ತರಿಸಲು ನೆರವಾಗಲಿದೆ. ಹಣಕಾಸು ಲಭ್ಯತೆ, ಮಾರ್ಗದರ್ಶನ (Mentorship) ಮತ್ತು ಮಾರುಕಟ್ಟೆ ಸಂಪರ್ಕವನ್ನು ಸುಧಾರಿಸಲು ಸರ್ಕಾರ ಬದ್ಧವಾಗಿದೆ ಎಂದು ಅವರು ಹೇಳಿದರು.
‘ರ‍್ಯಾಂಪ್’ (RAMP) ಯೋಜನೆಯಡಿ 6.40 ಕೋಟಿ ರೂ. ಮೀಸಲು:
ಎಂಎಸ್‌ಎಂಇ ಕಾರ್ಯಕ್ಷಮತೆ ಹೆಚ್ಚಿಸುವ ‘ರ‍್ಯಾಂಪ್’ (Raising and Accelerating MSME Performance – RAMP) ಕಾರ್ಯಕ್ರಮದ ಭಾಗವಾಗಿ, ಮಹಿಳಾ ನೇತೃತ್ವದ 240 ಎಂಎಸ್‌ಎಂಇಗಳಿಗಾಗಿ ವಿಶೇಷ ‘ವೇಗವರ್ಧಕ ಕಾರ್ಯಕ್ರಮ’ಗಳನ್ನು (Acceleration Programmes) ಸರ್ಕಾರ ಪ್ರಸ್ತಾಪಿಸಿದೆ. ತಲಾ ಆರು ತಿಂಗಳ ಅವಧಿಯ 12 ಬ್ಯಾಚ್‌ಗಳಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ವ್ಯವಸ್ಥಿತ ಮಾರ್ಗದರ್ಶನ ಮತ್ತು ಮಾರುಕಟ್ಟೆ ಜ್ಞಾನ ಒದಗಿಸಲಾಗುವುದು.
ಇದಲ್ಲದೆ, ಮಹಿಳಾ ಉದ್ದಿಮೆಗಳಲ್ಲಿ ನಾವೀನ್ಯತೆ (Innovation) ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸಲು ‘ಮಹಿಳಾ ಎಂಎಸ್‌ಎಂಇ ಹ್ಯಾಕಥಾನ್’ (Women MSME Hackathon) ಆಯೋಜಿಸಲಾಗುವುದು. ವಿಜೇತ 12 ಉದ್ದಿಮೆಗಳಿಗೆ ತಲಾ 10 ಲಕ್ಷ ರೂ. ಬಹುಮಾನ ನೀಡಲಾಗುವುದು ಹಾಗೂ ಕಾರ್ಯಕ್ರಮದ ಅನುಷ್ಠಾನ ವೆಚ್ಚಕ್ಕಾಗಿ 40 ಲಕ್ಷ ರೂ. ಮೀಸಲಿಡಲಾಗಿದೆ ಎಂದು ಮಾಹಿತಿ ನೀಡಿದರು.
ಈ ಹ್ಯಾಕಥಾನ್ ಹಾಗೂ ಇತರೆ ಹಲವಾರು ಕಾರ್ಯಕ್ರಮಗಳ ಮಾರ್ಗಸೂಚಿಗಳಿಗೆ ಎಂಎಸ್‌ಎಂಇ ನಿರ್ದೇಶನಾಲಯವು ಈಗಾಗಲೇ ಅನುಮೋದನೆ ನೀಡಿದ್ದು, ಅನುಷ್ಠಾನಗೊಳಿಸುವ ಏಜೆನ್ಸಿಗಳ ಆಯ್ಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ಮಹಿಳಾ ಉದ್ಯಮಶೀಲತೆಯನ್ನು ಬಲಪಡಿಸಲು ರ‍್ಯಾಂಪ್ (RAMP) ಕಾರ್ಯಕ್ರಮದಡಿ ಒಟ್ಟು 6.40 ಕೋಟಿ ರೂ. ಅನುದಾನವನ್ನು ಮೀಸಲಿಡಲಾಗಿದೆ ಎಂದು ಅವರು ತಿಳಿಸಿದರು.
ಮೈಸೂರು ಅರಮನೆಯ ರಾಜಮಾತೆ ಪ್ರಮೋದಾ ದೇವಿ ಒಡೆಯರ್, “ಮಹಿಳೆ ಇಂದು ಮಾತ್ರವಲ್ಲ, ನಾಳೆಯ ಬಗ್ಗೆಯೂ ಆಲೋಚನೆ ಮಾಡುತ್ತಾಳೆ. ಇದು ಅವಳ ಯಶಸ್ಸಿಗೆ ಕಾರಣವಾಗಲಿದೆ. ನಾವು ಇದೇ ಸಮಯದಲ್ಲಿ ಪರಿಸರ ಉಳಿಸುವ ಕೆಲಸ ಮಾಡಬೇಕು.ವಾಯು, ಜಲ ಮಾಲಿನ್ಯ ಎಲ್ಲವೂ ಒಂದು ಸವಾಲಾಗಿದೆ. ನಾವು ಸುಸ್ಥಿರ ಅಭಿವೃದ್ಧಿ ಗೆ ಮುಂದಾಗಬೇಕು. ಮುಂದಿನ ಪೀಳಿಗೆಗೆ ಈ ಎಲ್ಲಾ ಸಂಪನ್ಮೂಲಗಳನ್ನು ಉಳಿಸಬೇಕು” ಎಂದರು.
ಕಾರ್ಯಕ್ರಮದಲ್ಲಿ ನಟಿ ಸುಧಾ ಬೆಳವಾಡಿ ಹಾಗೂ ಎಫ್‌ಕೆಸಿಸಿಐ (FKCCI) ಅಧ್ಯಕ್ಷರಾದ ಉಮಾ ರೆಡ್ಡಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರನ್ನು ಸನ್ಮಾನಿಸಲಾಯಿತು.
‘AI ಯುಗ’ ಎಂಬುದು ಕೇವಲ ಅಪ್‌ಗ್ರೇಡ್ ಅಲ್ಲ, ಇಡೀ ಆರ್ಥಿಕತೆಯ ಮರುಹೊಂದಿಕೆ: ಜಿಯೋ
SSLC, PUC ಪಾಸಾಗಲು ಎಷ್ಟು ಅಂಕ ಪಡೆಯಬೇಕು? ಇಲ್ಲಿದೆ ಮಂಡಳಿಯ ಅಧಿಕೃತ ಮಾಹಿತಿ








