ಬಿಕ್ಕಳಿಕೆ ಎಂಬುದು ಎಲ್ಲರಿಗೂ ಕಾಡುವ ಸಾಮಾನ್ಯ ಸಮಸ್ಯೆ. ಆದರೆ ಕೆಲವು ಸಂದರ್ಭಗಳಲ್ಲಿ ಇದು ಅತಿಯಾಗಿ ಕಾಡತೊಡಗಿದಾಗ ಕಿರಿಕಿರಿ ಉಂಟುಮಾಡುವುದಲ್ಲದೆ, ಆರೋಗ್ಯದ ಮೇಲೆಯೂ ಪರಿಣಾಮ ಬೀರಬಹುದು. ವೈದ್ಯಕೀಯ ಲೋಕದಲ್ಲಿ ಇದನ್ನು ‘ಸಿಂಗಲ್ಟನ್’ (Singultus) ಎಂದು ಕರೆದರೆ, ಆಯುರ್ವೇದದಲ್ಲಿ ‘ಹಿಕ್ಕಾ’ ಎನ್ನಲಾಗುತ್ತದೆ.
ಬಿಕ್ಕಳಿಕೆ ಏಕೆ ಬರುತ್ತದೆ? ಇದನ್ನು ತಡೆಯುವ ಮಾರ್ಗಗಳೇನು? ಎಂಬ ಕುರಿತಾದ ಸಮಗ್ರ ಮಾಹಿತಿ ಇಲ್ಲಿದೆ.
ಬಿಕ್ಕಳಿಕೆಗೆ ಮುಖ್ಯ ಕಾರಣಗಳು:
ನಮ್ಮ ದೇಹದ ಶ್ವಾಸಕೋಶದ ಕೆಳಗಿರುವ ಡಯಾಫ್ರಾಮ್ ಸ್ನಾಯುವನ್ನು ನಿಯಂತ್ರಿಸುವ ಫ್ರೆನಿಕ್ ಮತ್ತು ವೇಗಸ್ ಎಂಬ ನರಗಳಲ್ಲಿ ಉಂಟಾಗುವ ಅಡಚಣೆ ಬಿಕ್ಕಳಿಕೆಗೆ ಮೂಲ ಕಾರಣ. ಇದರೊಂದಿಗೆ ಇತರ ಪ್ರಮುಖ ಕಾರಣಗಳೆಂದರೆ:
ಆಹಾರ ಪದ್ಧತಿ: ಅತಿಯಾದ ಮಸಾಲೆ, ಎಣ್ಣೆ ಪದಾರ್ಥ, ತಂಪು ಪಾನೀಯಗಳು (ಸೋಡಾ) ಹಾಗೂ ಮದ್ಯಪಾನದ ಸೇವನೆ.
ಜೀರ್ಣಕ್ರಿಯೆ ತೊಂದರೆ: ಅಜೀರ್ಣ, ಎದೆಯುರಿ (Acidity) ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗಳು.
ಮಾನಸಿಕ ಒತ್ತಡ: ಅತಿಯಾದ ಆತಂಕ, ನಿದ್ರೆಯಿಲ್ಲದ ಕಾರಣ ನರಗಳು ದುರ್ಬಲಗೊಳ್ಳುವುದು.
ಇತರ ಕಾಯಿಲೆಗಳು: ಅಪೆಂಡಿಸೈಟಿಸ್, ಪಿತ್ತಕೋಶದ ಕಲ್ಲುಗಳು ಅಥವಾ ಹೃದಯದ ಮೇಲ್ಪದರದ ಊತದಂತಹ ಗಂಭೀರ ಸಮಸ್ಯೆಗಳೂ ಬಿಕ್ಕಳಿಕೆಗೆ ಕಾರಣವಾಗಬಹುದು.
ತಕ್ಷಣದ ಪರಿಹಾರಕ್ಕಾಗಿ ಸರಳ ಉಪಾಯಗಳು:
ಬಿಕ್ಕಳಿಕೆ ಕಾಣಿಸಿಕೊಂಡಾಗ ಈ ಕೆಳಗಿನ ಕ್ರಮಗಳನ್ನು ಅನುಸರಿಸಬಹುದು:
ನೀರು: ತಣ್ಣೀರು ಅಥವಾ ಮಜ್ಜಿಗೆಯನ್ನು ಕುಡಿಯುವುದು.
ಉಸಿರಾಟ: ದೀರ್ಘವಾಗಿ ಉಸಿರನ್ನು ತೆಗೆದುಕೊಂಡು ಸ್ವಲ್ಪ ಸಮಯ ಹಿಡಿದಿಟ್ಟು ನಂತರ ನಿಧಾನವಾಗಿ ಬಿಡುವುದು (ಪ್ರಾಣಾಯಾಮ).
ಸಕ್ಕರೆ: ಸ್ವಲ್ಪ ಸಕ್ಕರೆಯನ್ನು ಬಾಯಿಗೆ ಹಾಕಿಕೊಂಡು ಚಪ್ಪರಿಸುವುದು.
ನರಗಳ ಪ್ರಚೋದನೆ: ನಾಲಿಗೆಯ ಬುಡದಲ್ಲಿ ಬೆರಳನ್ನಿಟ್ಟು ವಾಂತಿ ಮಾಡುವಂತೆ ಪ್ರಯತ್ನಿಸುವುದು.
ಆಯುರ್ವೇದ ಮತ್ತು ಮನೆಮದ್ದುಗಳು:
ಆಯುರ್ವೇದ ಶಾಸ್ತ್ರದ ಪ್ರಕಾರ ಬಿಕ್ಕಳಿಕೆಯನ್ನು ಶಾಂತಗೊಳಿಸಲು ಕೆಲವು ವಿಶೇಷ ಮದ್ದುಗಳಿವೆ:
ಮಜ್ಜಿಗೆ ಮಿಶ್ರಣ: ಧನಿಯಾ, ಜೀರಿಗೆ ಮತ್ತು ಶುಂಠಿಯ ಪುಡಿಯನ್ನು ಸಮಪ್ರಮಾಣದಲ್ಲಿ ಬೆರೆಸಿ, ಒಂದು ಲೋಟ ಮಜ್ಜಿಗೆಯೊಂದಿಗೆ 1-2 ಚಮಚ ಸೇವಿಸಬೇಕು.
ಗಂಜಿ ಸೇವನೆ: ಬಾರ್ಲಿ ಅಥವಾ ರಾಗಿ ಗಂಜಿಯನ್ನು ಮಜ್ಜಿಗೆಯೊಂದಿಗೆ ಸೇವಿಸಿದರೆ ದೇಹದ ಪಿತ್ತ ಕಡಿಮೆಯಾಗಿ ಬಿಕ್ಕಳಿಕೆ ನಿಲ್ಲುತ್ತದೆ.
ಬೆಚ್ಚಗಿನ ನೀರು: ಯಾವಾಗಲೂ ಉಗುರು ಬೆಚ್ಚಗಿನ ನೀರನ್ನು ಕುಡಿಯಿರಿ. ಅತಿಯಾದ ತಂಪು ಅಥವಾ ಬಿಸಿ ನೀರನ್ನು ತಪ್ಪಿಸಿ.
ಬೇಳೆ ಕಟ್ಟು: ಹೆಸರು ಬೇಳೆ ಅಥವಾ ತೊಗರಿ ಬೇಳೆಯ ಕಟ್ಟನ್ನು (ಹುಳಿ ಹಾಕದೆ) ಸೇವಿಸುವುದು ಪರಿಣಾಮಕಾರಿ.
ವಿಶೇಷ ಸೂಚನೆ:
ಒಂದು ವೇಳೆ ಬಿಕ್ಕಳಿಕೆ ಸತತವಾಗಿ ಎರಡು ದಿನಗಳಿಗಿಂತ ಹೆಚ್ಚು ಕಾಲ ಮುಂದುವರಿದರೆ, ಅದನ್ನು ನಿರ್ಲಕ್ಷಿಸಬೇಡಿ. ಇದು ಯಾವುದೋ ಗಂಭೀರ ಕಾಯಿಲೆಯ ಸೂಚನೆಯಾಗಿರಬಹುದು. ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವುದು ಅಗತ್ಯ.








