ಯಾದಗಿರಿ : ಅಪ್ರಾಪ್ತ ಬಾಲಕಿ ಜೊತೆಗೆ ಅನುಚಿತ ವರ್ತನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಮಲ್ಲಿಕಾರ್ಜುನ ಮುತ್ಯಾಗೆ ಪೊಲೀಸರು ನೋಟಿಸ್ ನೀಡಿದ್ದಾರೆ.
ಮುತ್ಯಾ ಸಂಪರ್ಕಕ್ಕೆ ಸಿಗದಿದ್ದಕ್ಕೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮಹಲ್ ರೋಜಾದ ಮಠಕ್ಕೆ ಗೋಗಿ ಠಾಣೆಯ ಪಿಎಸ್ ಐ ಶಿವರಾಜ್ ಪಾಟೀಲ್ ಅವರು ನೋಟಿಸ್ ಅಂಟಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಯಾದಗಿರಿ ಜಿಲ್ಲೆಯ ಗೋಗಿ ಪೊಲೀಸ್ ಠಾಣೆಯಲ್ಲಿ ಮಲ್ಲಿಕಾರ್ಜುನ್ ಮುತ್ಯಾ ವಿರುದ್ಧ 75(2) BNS ಸೆಕ್ಷನ್ ಅಡಿ ಪೋಕ್ಸೋ ಪ್ರಕರಣ ದಾಖಲಾಗಿದೆ. ಶಹಾಪುರ ಸಿಡಿಪಿಒ ಮಲ್ಲಣ್ಣ ಉಮಾಪತಿ ದೂರಿನಡಿ ಎಫ್ ಐಆರ್ ದಾಖಲಾಗಿದೆ. ಅಪ್ರಾಪ್ತ ಬಾಲಕಿ ಜೊತೆಗೆ ಅನುಚಿತ ವರ್ತನೆ ತೋರಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪೋಕ್ಸೋ ಪ್ರಕರಣ ರದ್ದು ಕೋರಿ ಕೋರ್ಟ್ ಮೆಟ್ಟಿಲೇರಿದ ಮಲ್ಲಿಕಾರ್ಜುನ ಮುತ್ಯಾ
ಬಾಲಕಿಯ ಜೊತೆಗೆ ಅನುಚಿತವಾಗಿ ವರ್ತಿಸಿದ್ದ ಕಾರಣ ಪೋಕ್ಸೋ ಕೇಸ್ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ದಾಖಲಾಗಿತ್ತು. ಈ ಪ್ರಕರಣ ರದ್ದುಗೊಳಿಸುವಂತೆ ಕಲಬುರ್ಗಿಯ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಮಲ್ಲಿಕಾರ್ಜುನ ಮುತ್ಯಾ ಅರ್ಜಿ ಸಲ್ಲಿಸಿದ್ದಾರೆ.
ರಾಜ್ಯ ಮಕ್ಕಳ ಹಕ್ಕುಗಳ ಆಯೋಗವು ಸೋಷಿಯಲ್ ಮೀಡಿಯಾದಲ್ಲಿ ಬಾಲಕಿಯೊಂದಿಗೆ ಮಲ್ಲಿಕಾರ್ಜುನ ಮುತ್ಯಾ ಅವರು ಅನುಚಿತವಾಗಿ ವರ್ತಿಸಿದ್ದ ವೀಡಿಯೋ ವೈರಲ್ ಬಗ್ಗೆ ದೂರು ದಾಖಲಿಸಿತ್ತು. ಈ ಸಂಬಂಧ ಯಾದಗಿರಿ ಎಸ್ಪಿ ಅವರಿಗೆ ಬರೆಯಲಾಗಿದ್ದಂತ ಪತ್ರದಡಿ, ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಯಾದಗಿರಿಯ ಗೋಗಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಾಗಿತ್ತು.
ಇದೀಗ ಮಲ್ಲಿಕಾರ್ಜುನ ಮುತ್ಯಾ ಅವರು ಈ ಪ್ರಕರಣ ರದ್ದುಗೊಳಿಸುವಂತೆ ಕಲಬುರ್ಗಿಯ ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅವರು ಸಲ್ಲಿಸಿರುವಂತ ಅರ್ಜಿಯಲ್ಲಿ ಪೋಷಕರೇ ದೂರು ನೀಡಿಲ್ಲ. ಹೀಗಿದ್ದರೂ ನನ್ನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಈ ಹಿನ್ನಲೆಯಲ್ಲಿ ಪ್ರಕರಣ ರದ್ದುಗೊಳಿಸುವಂತೆ ಹೈಕೋರ್ಟ್ ಗೆ ಮನವಿ ಮಾಡಿದ್ದಾರೆ. ಈ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಮಾರ್ಚ್.2ಕ್ಕೆ ನಿಗದಿ ಪಡಿಸಿದೆ.








