ಟೆಹ್ರಾನ್: ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಈಗ ಅತ್ಯಂತ ಭೀಕರ ರೂಪ ಪಡೆದುಕೊಂಡಿದೆ. ಶನಿವಾರ ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ಇರಾನ್ ರಾಜಧಾನಿ ಟೆಹ್ರಾನ್ ಸೇರಿದಂತೆ ಪ್ರಮುಖ ನಗರಗಳ ಮೇಲೆ ನಡೆಸಿದ ವಾಯುದಾಳಿಯಲ್ಲಿ ಇರಾನ್ನ ಸುಪ್ರೀಂ ಲೀಡರ್ ಆಯತೊಲ್ಲಾ ಅಲಿ ಖಮೇನಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಈ ಬೆನ್ನಲ್ಲೇ ಇರಾನ್ ಮಾಧ್ಯಮಗಳು ಕೂಡ ಈ ಸುದ್ದಿಯನ್ನು ಖಚಿತಪಡಿಸಿವೆ.
ಇಸ್ರೇಲ್ ವಾಯುಪಡೆಯ (IAF) ಯುದ್ಧ ವಿಮಾನಗಳು ಇರಾನ್ನ ಮಿಲಿಟರಿ ತಾಣಗಳನ್ನು ಗುರಿಯಾಗಿಸಿಕೊಂಡು ನಡೆಸಿದ ಈ ನಿಖರ ದಾಳಿಯಲ್ಲಿ ಇರಾನ್ ರಕ್ಷಣಾ ವ್ಯವಸ್ಥೆಯ ಬೆನ್ನೆಲುಬಾಗಿದ್ದ ಏಳು ಪ್ರಭಾವಿ ಹಿರಿಯ ಅಧಿಕಾರಿಗಳು ಹತರಾಗಿದ್ದಾರೆ.
ಇಸ್ರೇಲ್ ದಾಳಿಗೆ ಬಲಿಯಾದ ಪ್ರಮುಖರು ಯಾರು?
ಇಸ್ರೇಲ್ ಸೇನೆಯು ತನ್ನ ಅಧಿಕೃತ ಹೇಳಿಕೆಯಲ್ಲಿ ಈ ಏಳು ಅಧಿಕಾರಿಗಳ ಸಾವನ್ನು ಖಚಿತಪಡಿಸಿದ್ದು, “ಈ ವ್ಯಕ್ತಿಗಳಿಲ್ಲದ ಜಗತ್ತು ಈಗ ಹೆಚ್ಚು ಸುರಕ್ಷಿತವಾಗಿದೆ” ಎಂದು ತಿಳಿಸಿದೆ.
ಹತರಾದವರ ಪಟ್ಟಿ ಇಲ್ಲಿದೆ:
ಅಜೀಜ್ ನಸೀರ್ಜಾದೆ: ಇರಾನ್ನ ರಕ್ಷಣಾ ಸಚಿವರಾಗಿದ್ದ ಇವರು ದಾಳಿಯಲ್ಲಿ ಮೃತಪಟ್ಟ ಮೊದಲ ಪ್ರಮುಖ ವ್ಯಕ್ತಿ.
ಮೊಹಮ್ಮದ್ ಪಾಕ್ಪುರ್: IRGC (ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್) ಪಡೆಯ ಅತ್ಯಂತ ಶಕ್ತಿಶಾಲಿ ಕಮಾಂಡರ್-ಇನ್-ಚೀಫ್.
ಅಲಿ ಶಮ್ಖಾನಿ: ಇರಾನ್ ಸುಪ್ರೀಂ ಲೀಡರ್ ಖಮೇನಿ ಅವರ ಅತ್ಯಂತ ವಿಶ್ವಾಸಾರ್ಹ ಸಲಹೆಗಾರರಾಗಿದ್ದರು.
ಮೊಹಮ್ಮದ್ ಶಿರಜಿ: ಸುಪ್ರೀಂ ಲೀಡರ್ ಅವರ ಮಿಲಿಟರಿ ಬ್ಯೂರೋದ ಪ್ರಮುಖ ತಂತ್ರಜ್ಞ.
ಸಲೇಹ್ ಅಸಾದಿ: ಇರಾನ್ ಗುಪ್ತಚರ ಇಲಾಖೆಯ ಮಾಸ್ಟರ್ ಮೈಂಡ್ ಎಂದು ಹೆಸರಾಗಿದ್ದವರು.
ಹೊಸೈನ್ ಜಬಲ್ ಅಮೆಲಿಯನ್: ರಕ್ಷಣಾ ಸಂಶೋಧನಾ ಸಂಸ್ಥೆಯಾದ SPND ಅಧ್ಯಕ್ಷ.
ರೆಜಾ ಮೊಜಾಫರಿ-ನಿಯಾ: SPND ಮಾಜಿ ಅಧ್ಯಕ್ಷ ಮತ್ತು ಇರಾನ್ ಪರಮಾಣು ಕಾರ್ಯಕ್ರಮದ ಪ್ರಮುಖ ಸಂಚಾಲಕ.
ಅಮೆರಿಕ-ಇಸ್ರೇಲ್ ಜಂಟಿ ಕಾರ್ಯಾಚರಣೆ
ಇಸ್ರೇಲ್ ಮಾಧ್ಯಮ ‘ವೈನೆಟ್’ ನೀಡಿರುವ ವರದಿಯ ಪ್ರಕಾರ, ಅಮೆರಿಕದ ಗುಪ್ತಚರ ಸಂಸ್ಥೆ CBS ಮೂಲಗಳನ್ನು ಉಲ್ಲೇಖಿಸಿ ಈ ದಾಳಿಯಲ್ಲಿ ಸುಮಾರು 40ಕ್ಕೂ ಹೆಚ್ಚು ಹಿರಿಯ ಅಧಿಕಾರಿಗಳು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಖಮೇನಿ ಸಾವಿನ ಬಗ್ಗೆ ಮೊದಲು ಸುಳಿವು ನೀಡಿದ್ದರು. ಸದ್ಯ ಖಮೇನಿ ಅವರ ಮೃತದೇಹ ಪತ್ತೆಯಾಗಿದ್ದು, ಇರಾನ್ನ ಮುಂದಿನ ಸರ್ವೋಚ್ಚ ನಾಯಕ ಯಾರಾಗಲಿದ್ದಾರೆ ಎಂಬ ಕುತೂಹಲ ಇಡೀ ವಿಶ್ವದಾದ್ಯಂತ ಮನೆಮಾಡಿದೆ.
ಈ ದಾಳಿಯಿಂದಾಗಿ ಇರಾನ್ನ ಮಿಲಿಟರಿ ನಾಯಕತ್ವ ಸಂಪೂರ್ಣವಾಗಿ ಹದಗೆಟ್ಟಿದ್ದು, ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ಮತ್ತಷ್ಟು ಹೆಚ್ಚಾಗಿದೆ.








