ಟೆಹ್ರಾನ್/ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಮತ್ತಷ್ಟು ಹೆಚ್ಚಾಗಿದ್ದು, ಅಮೆರಿಕದ 14 ಸೇನಾ ನೆಲೆಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿರುವುದಾಗಿ ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಘೋಷಿಸಿದೆ. ಈ ದಾಳಿಯಲ್ಲಿ ನೂರಾರು ಅಮೆರಿಕನ್ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿದ್ದರೂ, ಅಮೆರಿಕ ಇದನ್ನು ಸಂಪೂರ್ಣವಾಗಿ ತಳ್ಳಿಹಾಕಿದೆ.
ಇರಾನ್ ತನ್ನ ‘ಟ್ರುತ್ಫುಲ್ ಪ್ರಾಮಿಸ್-4’ (Operation Truthful Promise 4) ಕಾರ್ಯಾಚರಣೆಯ ಭಾಗವಾಗಿ ಬಹ್ರೇನ್, ಕತಾರ್, ಕುವೈತ್ ಮತ್ತು ಯುಎಇಗಳಲ್ಲಿರುವ ಅಮೆರಿಕದ ಪ್ರಮುಖ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡಿದೆ.ದಾಳಿಯಲ್ಲಿ ಕನಿಷ್ಠ 14 ಅಮೆರಿಕನ್ ನೆಲೆಗಳು ಧ್ವಂಸಗೊಂಡಿವೆ ಮತ್ತು 200ಕ್ಕೂ ಹೆಚ್ಚು ಅಮೆರಿಕನ್ ಸೈನಿಕರು ಹತರಾಗಿದ್ದಾರೆ ಅಥವಾ ಗಾಯಗೊಂಡಿದ್ದಾರೆ ಎಂದು ಐಆರ್ಜಿಸಿ (IRGC) ಅಧಿಕಾರಿಗಳು ಪ್ರತಿಪಾದಿಸಿದ್ದಾರೆ.
ಅಮೆರಿಕದ ಸ್ಪಷ್ಟನೆ: ಇರಾನ್ನ ಈ ಹೇಳಿಕೆಯನ್ನು ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಸುಳ್ಳು ಎಂದು ಕರೆದಿದೆ. ದಾಳಿಯಿಂದ ಯಾವುದೇ ಅಮೆರಿಕನ್ ಸೈನಿಕರಿಗೆ ಪ್ರಾಣಾಪಾಯವಾಗಿಲ್ಲ ಮತ್ತು ಅಮೆರಿಕದ ನೌಕಾಪಡೆಯ ಹಡಗುಗಳು ಸುರಕ್ಷಿತವಾಗಿವೆ ಎಂದು ವಾಷಿಂಗ್ಟನ್ ತಿಳಿಸಿದೆ.







