ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯಾಧಿಕಾರಿಗಳು ಇನ್ನು ಮುಂದೆ ಉನ್ನತ ವ್ಯಾಸಂಗಕ್ಕೆ (PG/DNB/Diploma) ತೆರಳುವ ಮುನ್ನ ಕಟ್ಟುನಿಟ್ಟಾದ ಹೊಸ ಷರತ್ತುಗಳಿಗೆ ಒಳಪಡಬೇಕಾಗುತ್ತದೆ. ಈ ಸಂಬಂಧ ಕರ್ನಾಟಕ ಸರ್ಕಾರವು ಫೆಬ್ರವರಿ 27, 2026 ರಂದು ಅಧಿಕೃತ ಆದೇಶ ಹೊರಡಿಸಿದೆ.
ವೈದ್ಯಾಧಿಕಾರಿಗಳು ಪಡೆಯುವ ಉನ್ನತ ಶಿಕ್ಷಣದ ಪ್ರಯೋಜನವು ಸಾರ್ವಜನಿಕರಿಗೆ ದೊರೆಯಬೇಕು ಎನ್ನುವ ಉದ್ದೇಶದಿಂದ ಸರ್ಕಾರವು ಈ ಕೆಳಕಂಡ ಪ್ರಮುಖ ಬದಲಾವಣೆಗಳನ್ನು ತಂದಿದೆ:
1. 10 ವರ್ಷಗಳ ಕಡ್ಡಾಯ ಸೇವೆ
ಸ್ನಾತಕೋತ್ತರ (PG), ಡಿ.ಎನ್.ಬಿ (DNB) ಅಥವಾ ಡಿಪ್ಲೊಮಾ ವ್ಯಾಸಂಗಕ್ಕೆ ನಿಯೋಜನೆಗೊಳ್ಳುವ ಎಲ್ಲಾ ವೈದ್ಯರು, ತಮ್ಮ ವ್ಯಾಸಂಗ ಮುಗಿದ ನಂತರ ಕನಿಷ್ಠ 10 ವರ್ಷಗಳ ಕಾಲ ಸರ್ಕಾರಿ ಸೇವೆಯಲ್ಲಿ ಮುಂದುವರಿಯುವುದಾಗಿ ಬಂಧಪತ್ರ (Bond) ನೀಡಬೇಕು. ವಿಶೇಷವೆಂದರೆ, ಅವರು ತಾವು ಪಡೆದ ತಜ್ಞತೆಯಲ್ಲೇ (Specialization) ಹುದ್ದೆಗಳು ಲಭ್ಯವಿದ್ದಲ್ಲಿ ಅಲ್ಲಿಯೇ ಸೇವೆ ಸಲ್ಲಿಸುವುದು ಕಡ್ಡಾಯವಾಗಿದೆ.
2. ವ್ಯಾಸಂಗ ಪೂರ್ಣಗೊಳಿಸಲು ವಿಫಲವಾದರೆ ದಂಡ
ವೈದ್ಯಾಧಿಕಾರಿಗಳು ನಿಗಧಿತ ಅವಧಿಯೊಳಗೆ ವ್ಯಾಸಂಗವನ್ನು ಪೂರ್ಣಗೊಳಿಸಲು ವಿಫಲವಾದರೆ ಸರ್ಕಾರಕ್ಕೆ ನಿಗಧಿತ ದಂಡ ಪಾವತಿಸಬೇಕಾಗುತ್ತದೆ. ಅಷ್ಟೇ ಅಲ್ಲದೆ, ಹಾಜರಾತಿ, ಲಾಗ್ಬುಕ್ ನಿರ್ವಹಣೆ, ತರಬೇತಿ ಮಾನದಂಡಗಳು ಅಥವಾ ರಾಷ್ಟ್ರೀಯ ಪರೀಕ್ಷಾ ಮಂಡಳಿಯು ಸೂಚಿಸಿದ ಶೈಕ್ಷಣಿಕ ಅವಶ್ಯಕತೆಗಳನ್ನು ಪಾಲಿಸದಿದ್ದರೂ ಶಿಕ್ಷೆ ಅನ್ವಯವಾಗಲಿದೆ.
3. ವೇತನ ಬಿಡುಗಡೆಗೆ ವಾರ್ಷಿಕ ಪ್ರಮಾಣೀಕರಣ ಕಡ್ಡಾಯ
ವ್ಯಾಸಂಗದ ಅವಧಿಯಲ್ಲಿ ವೈದ್ಯರ ಮಾಸಿಕ ವೇತನ ಬಿಡುಗಡೆಯು ಈಗ ಷರತ್ತುಬದ್ಧವಾಗಿದೆ. ವೈದ್ಯಾಧಿಕಾರಿಯು NBEMS ಪಠ್ಯಕ್ರಮದಂತೆ ಅಗತ್ಯ ಸಾಮರ್ಥ್ಯ ಮತ್ತು ಕೌಶಲ್ಯಗಳನ್ನು ಪಡೆದಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರಿಂದ ವಾರ್ಷಿಕ ಪ್ರಮಾಣೀಕರಣ (Annual Certification) ಪಡೆಯುವುದು ಕಡ್ಡಾಯ. ಈ ಪ್ರಮಾಣಪತ್ರ ಸಲ್ಲಿಸಿದರೆ ಮಾತ್ರ ವೇತನ ಬಿಡುಗಡೆಯಾಗಲಿದೆ.
ಅವಧಿ ಮತ್ತು ರಜೆ ನಿಯಮಗಳು
ಉನ್ನತ ವ್ಯಾಸಂಗದ ಅವಧಿಯನ್ನು ಕರ್ತವ್ಯದ ಮೇಲಿದ್ದಂತೆ (On Duty) ಪರಿಗಣಿಸಲಾಗುತ್ತದೆ.
ಒಂದು ವೇಳೆ ನಿಗದಿತ ಅವಧಿಯಲ್ಲಿ ವ್ಯಾಸಂಗ ಮುಗಿಸಲು ಸಾಧ್ಯವಾಗದಿದ್ದರೆ, ಗರಿಷ್ಠ ಒಂದು ವರ್ಷದ ವಿಸ್ತರಣೆ ನೀಡಬಹುದು.
ಈ ವಿಸ್ತರಣಾ ಅವಧಿಯಲ್ಲಿ ಲಭ್ಯವಿರುವ ರಜೆಯನ್ನು ಬಳಸಿಕೊಳ್ಳಬಹುದು, ಉಳಿದ ಅವಧಿಯನ್ನು ಅಸಾಧಾರಣ ರಜೆ ಎಂದು ಪರಿಗಣಿಸಲಾಗುವುದು.
ಸರ್ಕಾರದ ಈ ನೂತನ ಆದೇಶವು ತಕ್ಷಣದಿಂದಲೇ ಜಾರಿಗೆ ಬರಲಿದ್ದು, ರಾಜ್ಯದ ಎಲ್ಲಾ ಜಿಲ್ಲಾ ಆರೋಗ್ಯ ಅಧಿಕಾರಿಗಳು ಮತ್ತು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯಕ್ಕೆ ಈ ಕುರಿತು ಸೂಚನೆ ನೀಡಲಾಗಿದೆ.









