ಇತ್ತೀಚಿನ ದಿನಗಳಲ್ಲಿ ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಅಥವಾ ಕ್ರೀಡಾ ಚಟುವಟಿಕೆಗಳ ಸಮಯದಲ್ಲಿ ಯುವಕರು ಮತ್ತು ಮಧ್ಯವಯಸ್ಕರು ದಿಢೀರನೆ ಕುಸಿದು ಬಿದ್ದು ಸಾವನ್ನಪ್ಪುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಇದಕ್ಕೆ ಕೇವಲ ಹೃದಯಾಘಾತ (Heart Attack) ಮಾತ್ರ ಕಾರಣವಲ್ಲ, ಇದರ ಹಿಂದೆ ಹತ್ತು ಹಲವು ವೈದ್ಯಕೀಯ ಕಾರಣಗಳಿವೆ ಎಂದು ಖ್ಯಾತ ಹೃದಯ ಮತ್ತು ಶ್ವಾಸಕೋಶ ಶಸ್ತ್ರಚಿಕಿತ್ಸಕ ಡಾ. ಸಿ. ಪ್ರಭಾಕರ್ ರೆಡ್ಡಿ ತಿಳಿಸಿದ್ದಾರೆ.
ಹಠಾತ್ ಸಾವುಗಳಿಗೆ ಪ್ರಮುಖ ಕಾರಣಗಳೇನು?
ಕೇವಲ ರಕ್ತನಾಳದ ಬ್ಲಾಕ್ ಮಾತ್ರವಲ್ಲದೆ, ಈ ಕೆಳಗಿನ ಕಾರಣಗಳಿಂದಲೂ ಸಾವು ಸಂಭವಿಸಬಹುದು:
ಪತ್ತೆಯಾಗದ ರಕ್ತನಾಳದ ಕಾಯಿಲೆಗಳು: ಹೃದಯದ ರಕ್ತನಾಳಗಳಲ್ಲಿ ಕೊಬ್ಬು ಶೇಖರಣೆಗೊಂಡು ಬ್ಲಾಕ್ ಆಗುವುದು.
ಹೃದಯದ ಸ್ನಾಯುಗಳ ತೊಂದರೆ: ಹೈಪರ್ ಟ್ರೋಫಿಕ್ ಕಾರ್ಡಿಯೋಮಯೋಪತಿ (HCM) ಅಂದರೆ ಹೃದಯದ ಸ್ನಾಯುಗಳು ದಪ್ಪಗಾಗುವುದು.
ಅರಿತ್ಮಿಯಾ (Arrhythmia): ಹೃದಯದ ಬಡಿತದ ಲಯ ತಪ್ಪುವುದು (VF/VT).
ನಿರ್ಜಲೀಕರಣ (Dehydration): ತೀವ್ರ ವ್ಯಾಯಾಮದ ನಂತರ ದೇಹದಲ್ಲಿ ನೀರಿನಂಶ ಕಡಿಮೆಯಾಗುವುದು.
ಸ್ವಯಂ ಮದ್ದುಗಾರಿಕೆ: ವೈದ್ಯರ ಸಲಹೆ ಇಲ್ಲದೆ ಸಪ್ಲಿಮೆಂಟ್‌ಗಳು ಮತ್ತು ಸ್ಟೀರಾಯ್ಡ್‌ಗಳ ಬಳಕೆ.
ತಪಾಸಣೆ ಅತ್ಯಗತ್ಯ: ಯಾರಿಗೆ ಯಾವ ಪರೀಕ್ಷೆ?
40 ವರ್ಷ ದಾಟಿದವರು ಅಥವಾ ಜಿಮ್‌ಗೆ ಸೇರಬಯಸುವವರು ಈ ಕೆಳಗಿನ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಉತ್ತಮ:
ECG ಮತ್ತು ಎಕೋ (Echo): ಹೃದಯದ ಬಡಿತ ಮತ್ತು ರಚನೆಯನ್ನು ತಿಳಿಯಲು.
ಟ್ರೆಡ್ ಮಿಲ್ ಟೆಸ್ಟ್ (TMT): ವ್ಯಾಯಾಮದ ಸಮಯದಲ್ಲಿ ಹೃದಯದ ಸಾಮರ್ಥ್ಯ ಪರೀಕ್ಷಿಸಲು.
ಲಿಪಿಡ್ ಪ್ರೊಫೈಲ್: ಕೊಲೆಸ್ಟ್ರಾಲ್ ಮಟ್ಟ ಪರೀಕ್ಷಿಸಲು.
CT ಆಂಜಿಯೋಗ್ರಾಮ್: ರಕ್ತನಾಳಗಳಲ್ಲಿನ ಕ್ಯಾಲ್ಸಿಯಂ ಪ್ರಮಾಣ ಮತ್ತು ಬ್ಲಾಕ್‌ಗಳನ್ನು ತಿಳಿಯಲು (5 ವರ್ಷಕ್ಕೊಮ್ಮೆ).
ತುರ್ತು ಪರಿಸ್ಥಿತಿಯಲ್ಲಿ ಏನು ಮಾಡಬೇಕು? (ಜೀವ ಉಳಿಸುವ ಸೂತ್ರ)
ಒಬ್ಬ ವ್ಯಕ್ತಿ ಹೃದಯ ನೋವಿನಿಂದ ಬಳಲುತ್ತಿದ್ದರೆ ಅಥವಾ ಕುಸಿದು ಬಿದ್ದರೆ, ಕೂಡಲೇ ಮಾಡಬೇಕಾದ ಕೆಲಸಗಳು:
ಆಸ್ಪಿರಿನ್ (Aspirin) ಮಾತ್ರೆ: 375 mg ನ ಎರಡು ಆಸ್ಪಿರಿನ್ ಮಾತ್ರೆಗಳನ್ನು ಅಥವಾ 75 mg ನ ನಾಲ್ಕು ಮಾತ್ರೆಗಳನ್ನು ಕೂಡಲೇ ನಮಿಯಲು (Chew) ನೀಡಬೇಕು. ಇದು ಲಾಲಾರಸದ ಮೂಲಕ ಶೀಘ್ರವಾಗಿ ರಕ್ತ ಸೇರಿ, ರಕ್ತ ಹೆಪ್ಪುಗಟ್ಟುವುದನ್ನು ತಡೆದು ಹಾರ್ಟ್ ಅಟ್ಯಾಕ್ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ನಿಲ್ಲಿಸುತ್ತದೆ.
CPR ಕ್ರಿಯೆ: ರೋಗಿ ಪ್ರಜ್ಞೆ ತಪ್ಪಿದ್ದರೆ ಕೂಡಲೇ ಸಿಪಿಆರ್ (CPR) ಪ್ರಾರಂಭಿಸಬೇಕು.
108 ಸಹಾಯವಾಣಿ: ಕೂಡಲೇ ಆಂಬ್ಯುಲೆನ್ಸ್ ಕರೆ ಮಾಡಿ, ಸಿಪಿಆರ್ ಮಾಡುತ್ತಲೇ ಆಸ್ಪತ್ರೆಗೆ ಸಾಗಿಸಬೇಕು.
ನೆನಪಿಡಿ: ಕೋಟಿ ರೂಪಾಯಿ ಹಣ, ಅಧಿಕಾರ ಅಥವಾ ದೊಡ್ಡ ಕಾರ್ಪೊರೇಟ್ ಆಸ್ಪತ್ರೆಗಳಿಗಿಂತಲೂ, ಆ ಕ್ಷಣದಲ್ಲಿ ನೀಡುವ 2 ಆಸ್ಪಿರಿನ್ ಮಾತ್ರೆಗಳು ಮತ್ತು ಸಿಪಿಆರ್ ವ್ಯಕ್ತಿಯ ಪ್ರಾಣ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಮುನ್ನೆಚ್ಚರಿಕೆ ಕ್ರಮಗಳು:
ಧೂಮಪಾನ, ಮದ್ಯಪಾನ, ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಮಾನಸಿಕ ಒತ್ತಡವಿರುವವರು ಹೆಚ್ಚು ಜಾಗರೂಕರಾಗಿರಬೇಕು. ನಿಯಮಿತವಾಗಿ ವೈದ್ಯರನ್ನು ಕಂಡು ಅಗತ್ಯವಿದ್ದರೆ ಅಟೋರ್ವಸ್ಟಾಟಿನ್ (Atorvastatin) ಅಥವಾ ಎಕೋಸ್ಪಿರಿನ್‌ನಂತಹ ಮಾತ್ರೆಗಳನ್ನು ಅವರ ಸಲಹೆಯಂತೆ ಸೇವಿಸಬೇಕು.








