ಶಿವಮೊಗ್ಗ: ಸಾಗರ ತಾಲೂಕಿನ ಬೇಸೂರಿನಲ್ಲಿ ಉದ್ದೇಶಿತ ಪರಮಾಣು ವಿದ್ಯುತ್ ಸ್ಥಾವರ ಯೋಜನೆಯನ್ನು ಸರ್ಕಾರ ಸಂಪೂರ್ಣವಾಗಿ ಕೈಬಿಡುವವರೆಗೂ ವಿಶ್ರಮಿಸದೆ ಸರಣಿ ಹೋರಾಟ ರೂಪಿಸಲಾಗುವುದು ಎಂದು ಮಲೆನಾಡು ಅಣು ಸ್ಥಾವರ ವಿರೋಧಿ ಹೋರಾಟ ವೇದಿಕೆ ಎಚ್ಚರಿಸಿದೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಣುಸ್ಥಾವರ ವಿರೋಧಿ ಭಿತ್ತಿಪತ್ರ ಬಿಡುಗಡೆ ಮಾಡಿ ಮಾತನಾಡಿದ ವೇದಿಕೆಯ ಅಧ್ಯಕ್ಷ ಬಿ.ಎ. ಇಂದೂಧರ ಬೇಸೂರು, ಮಲೆನಾಡಿನ ಯಾವುದೇ ಪ್ರದೇಶದಲ್ಲಿ ಅಣು ಸ್ಥಾವರ ಸ್ಥಾಪಿಸುವುದನ್ನು ಕಟುವಾಗಿ ವಿರೋಧಿಸಿದರು.
ಹೋರಾಟದ ರೂಪುರೇಷೆಗಳು:
ಯೋಜನೆ ಕೈಬಿಡುವಂತೆ ಒತ್ತಾಯಿಸಿ ಮುಂದಿನ ದಿನಗಳಲ್ಲಿ ಹಂತ-ಹಂತವಾಗಿ ಈ ಕೆಳಗಿನ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗಿದೆ:
-
ಮೇ 18: ಹುಲಿದೇವರಬನದಲ್ಲಿ ಬೆಳಿಗ್ಗೆ 10:30ಕ್ಕೆ 200ಕ್ಕೂ ಹೆಚ್ಚು ಮಕ್ಕಳಿಂದ ‘ನಮ್ಮೂರಿಗೆ ಅಣು ವಿದ್ಯುತ್ ಸ್ಥಾವರ ಬೇಡ’ ಎಂದು ಪ್ರತಿಭಟನೆ.
-
ಮೇ 20: ಬೆಳಿಗ್ಗೆ 9 ಗಂಟೆಗೆ ಬೇಸೂರು ಬಸವಣ್ಣ ದೇವಸ್ಥಾನದಿಂದ ಸಾಗರ ಉಪವಿಭಾಗಾಧಿಕಾರಿಗಳ ಕಚೇರಿವರೆಗೆ ಬೃಹತ್ ಪಾದಯಾತ್ರೆ.
-
ಮೇ 21 ರಿಂದ ಮೇ 26: ಸಾಗರ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ನಿರಂತರ ಧರಣಿ.
-
ಮೇ 27: ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನಾ ಸಮಾವೇಶ.
ಲಿಖಿತ ಆದೇಶ ನೀಡುವವರೆಗೂ ಹೋರಾಟ ನಿಲ್ಲದು
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಯೋಜನೆಯನ್ನು ಅಧಿಕೃತವಾಗಿ ಕೈಬಿಟ್ಟಿರುವುದಾಗಿ ಲಿಖಿತ ಆದೇಶ ಹೊರಡಿಸಬೇಕು ಎಂದು ಇಂದೂಧರ ಒತ್ತಾಯಿಸಿದರು. “ಒಂದು ವೇಳೆ ಸರ್ಕಾರ ಸ್ಪಂದಿಸದಿದ್ದರೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಹೋರಾಟ ನಡೆಸಲಾಗುವುದು. ಇದಕ್ಕೆ ಉಚ್ಚ ನ್ಯಾಯಾಲಯದ ಹಲವು ವಕೀಲರು ಬೆಂಬಲ ನೀಡುವ ಭರವಸೆ ನೀಡಿದ್ದಾರೆ,” ಎಂದು ಅವರು ತಿಳಿಸಿದರು.
ಆವಿನಹಳ್ಳಿ ಹೋಬಳಿಯಲ್ಲಿ ಆತಂಕದ ಛಾಯೆ
ಯೋಜನೆಯ ಹೆಸರಿನಲ್ಲಿ ಮತ್ತೊಮ್ಮೆ ಒಕ್ಕಲೆಬ್ಬಿಸುವ ಭೀತಿ ಸಾವಿರಾರು ಕುಟುಂಬಗಳನ್ನು ಕಾಡುತ್ತಿದೆ. “ಈಗಾಗಲೇ ಹಲವು ಯೋಜನೆಗಳಿಗೆ ಭೂಮಿ ಕಳೆದುಕೊಂಡಿದ್ದೇವೆ. ಈಗ ಮತ್ತೆ ನಮ್ಮ ಮನೆ, ಮಕ್ಕಳು, ಜಾನುವಾರು ಮತ್ತು ದೇವರನ್ನು ಎಲ್ಲಿಗೆ ತೆಗೆದುಕೊಂಡು ಹೋಗಬೇಕು?” ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಹೋರಾಟಕ್ಕೆ ಪಕ್ಷಾತೀತವಾಗಿ ಎಲ್ಲರೂ ಕೈಜೋಡಿಸಬೇಕೆಂದು ಅವರು ಮನವಿ ಮಾಡಿದರು.
ಮಲೆನಾಡಿಗರ ಮೇಲೆ ಮತ್ತೊಂದು ಧಮನಕಾರಿ ಯೋಜನೆ
ಮಲೆನಾಡು ರೈತ ಹೋರಾಟ ವೇದಿಕೆಯ ಸಂಚಾಲಕ ತೀ.ನ. ಶ್ರೀನಿವಾಸ್ ಮಾತನಾಡಿ, “ಜಿಲ್ಲೆಯ ಜನರು ಅಣೆಕಟ್ಟುಗಳ ನಿರ್ಮಾಣಕ್ಕಾಗಿ ಈಗಾಗಲೇ ಲಕ್ಷಾಂತರ ಎಕರೆ ಭೂಮಿಯನ್ನು ತ್ಯಾಗ ಮಾಡಿ ಸಂತ್ರಸ್ತ ಜೀವನ ನಡೆಸುತ್ತಿದ್ದಾರೆ. ಅಣು ಸ್ಥಾವರದಂತಹ ವಿನಾಶಕಾರಿ ಮತ್ತು ಧಮನಕಾರಿ ಯೋಜನೆಯನ್ನು ನಾವು ಸಹಿಸುವುದಿಲ್ಲ,” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಸೀತಾರಾಮ ಕುರುವರಿ, ಶಿವಾನಂದ ಗೌಡ, ಅರವಿಂದ, ಭಾಸ್ಕರ, ನಾಗರಾಜ್, ನಾಗೇಂದ್ರ ಸಾಗರ್
ಉಪಸ್ಥಿತರಿದ್ದರು.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಬೇಸೂರು ಅಣು ಸ್ಥಾವರ ಯೋಜನೆಯ ವಿರುದ್ಧ ಮಲೆನಾಡಿಗರು ರೊಚ್ಚಿಗೆದ್ದಿದ್ದು, ಸರ್ಕಾರದ ಲಿಖಿತ ಆದೇಶಕ್ಕಾಗಿ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಬೀದಿಗಿಳಿಯಲು ಸಜ್ಜಾಗಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು..
BREAKING: ಕೊಪ್ಪಳ ಟ್ರ್ಯಾಕ್ಟರ್ ದುರಂತ: ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ ಸಿದ್ದರಾಮಯ್ಯ







