ಬೆಂಗಳೂರು: ರಾಜ್ಯ ಸರ್ಕಾರಿ ಸೇವೆಯಲ್ಲಿರುವ ಮಹಿಳಾ ನೌಕರರ ಆರೋಗ್ಯ ಮತ್ತು ಕಾರ್ಯಕ್ಷಮತೆಯನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ಸರ್ಕಾರವು ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಇನ್ಮುಂದೆ ಮಹಿಳಾ ನೌಕರರಿಗೆ ಪ್ರತಿ ತಿಂಗಳು ಒಂದು ದಿನದಂತೆ ವರ್ಷಕ್ಕೆ ಒಟ್ಟು 12 ದಿನಗಳ ವೇತನ ಸಹಿತ ‘ಋತುಚಕ್ರ ರಜೆ’ (Menstrual Leave) ಸೌಲಭ್ಯವನ್ನು ನೀಡಲು ಆದೇಶಿಸಲಾಗಿದೆ.
ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಯಿಂದ ಈ ಕುರಿತು ಅಧಿಕೃತ ಜ್ಞಾಪನಾ ಪತ್ರ ಹೊರಡಿಸಲಾಗಿದ್ದು, ರಜೆ ಪಡೆಯಲು ಇರುವ ಪ್ರಮುಖ ನಿಯಮಗಳು ಇಲ್ಲಿವೆ:
ರಜೆಯ ಪ್ರಮುಖ ನಿಯಮಗಳು ಮತ್ತು ನಿಬಂಧನೆಗಳು:
ವಯೋಮಿತಿ: 18 ರಿಂದ 52 ವರ್ಷದೊಳಗಿನ ಮುಟ್ಟು ಹೊಂದಿರುವ ಎಲ್ಲಾ ಮಹಿಳಾ ಸರ್ಕಾರಿ ನೌಕರರು ಈ ರಜೆ ಪಡೆಯಲು ಅರ್ಹರು.
ವೈದ್ಯಕೀಯ ಪ್ರಮಾಣಪತ್ರದ ಅಗತ್ಯವಿಲ್ಲ: ಈ ರಜೆ ಪಡೆಯಲು ಯಾವುದೇ ರೀತಿಯ ವೈದ್ಯಕೀಯ ದೃಢೀಕರಣ ಪತ್ರವನ್ನು ಸಲ್ಲಿಸುವ ಅಗತ್ಯವಿರುವುದಿಲ್ಲ.
ನಗದು ರೂಪಕ್ಕೆ ಬದಲಾಯಿಸುವಂತಿಲ್ಲ (No Carry Over): ಆಯಾ ತಿಂಗಳ ರಜೆಯನ್ನು ಅದೇ ತಿಂಗಳಲ್ಲಿ ಬಳಸಿಕೊಳ್ಳಬೇಕು. ಒಂದು ವೇಳೆ ಬಳಸದಿದ್ದರೆ ಅದು ಮುಂದಿನ ತಿಂಗಳಿಗೆ ವರ್ಗಾವಣೆಯಾಗುವುದಿಲ್ಲ.
ಪ್ರತ್ಯೇಕ ದಾಖಲೆ: ಈ ರಜೆಯನ್ನು ಹಾಜರಾತಿ ಪುಸ್ತಕದಲ್ಲಿ ಪ್ರತ್ಯೇಕವಾಗಿಯೇ ನಮೂದಿಸಬೇಕು.
ಇತರ ರಜೆಗಳೊಂದಿಗೆ ಸೇರಿಸುವಂತಿಲ್ಲ: ಈ ಋತುಚಕ್ರ ರಜೆಯನ್ನು ಬೇರೆ ಯಾವುದೇ ರಜೆಗಳ ಜೊತೆ ಸೇರಿಸಿ (Combine) ತೆಗೆದುಕೊಳ್ಳಲು ಅವಕಾಶವಿರುವುದಿಲ್ಲ.
ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ ಮಹಿಳಾ ನೌಕರರು EEDS (Electronic Employee Data System) ಮುಖಾಂತರ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿ ಈ ರಜೆಯನ್ನು ಪಡೆದುಕೊಳ್ಳಬಹುದಾಗಿದೆ. ಕಚೇರಿಯ ತುರ್ತು ಕೆಲಸಗಳಿದ್ದಲ್ಲಿ ಸಂದರ್ಭಕ್ಕನುಸಾರವಾಗಿ ರಜೆ ಸೌಲಭ್ಯವನ್ನು ಬಳಸಿಕೊಳ್ಳಲು ಸೂಚಿಸಲಾಗಿದೆ.
ಮಹಿಳಾ ನೌಕರರ ಮನೋಸ್ಥೈರ್ಯ ಹೆಚ್ಚಿಸಲು ಮತ್ತು ಅವರ ಆರೋಗ್ಯದ ದೃಷ್ಟಿಯಿಂದ ಸರ್ಕಾರ ಕೈಗೊಂಡಿರುವ ಈ ನಿರ್ಧಾರಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.








