ಶಿವಮೊಗ್ಗ : ಶಿವಮೊಗ್ಗದಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು ಜಗಳ ಬಿಡಿಸಲು ಹೋದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಒಬ್ಬನನ್ನು ನಾಲ್ವರು ಆತನ ಮೇಲೆ ಹಲ್ಲೆ ಮಾಡಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಶಿವಮೊಗ್ಗದ ಸೂಳೆಬೈಲು ಬಡಾವಣೆಯಲ್ಲಿ ನಡೆದಿದೆ. ಈ ಒಂದು ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಐವರು ಅಪರಾಪ್ತರನ್ನು ಅರೆಸ್ಟ್ ಮಾಡಿದ್ದಾರೆ.
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಸಂಕೇತ್ (16) ಕೊಲೆಯಾಗಿದ್ದಾನೆ. ಸೂಳೆಬೈಲು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದ ಸಂಕೇತ್ ಸೋಮವಾರ ಸ್ಪೆಷಲ್ ಕ್ಲಾಸ್ ಮುಗಿಸಿ ಹೊರಬಂದಾಗ ಇತರ ಕೆಲ ವಿದ್ಯಾರ್ಥಿಗಳ ನಡುವೆ ಜಗಳವಾಗುತ್ತಿತ್ತು. ಅವರ ಜಗಳವನ್ನು ಬಿಡಿಸಲು ಹೋದಾಗ ಸಂಕೇತ್ ಮೇಲೆ ನಾಲ್ವರು ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದಾರೆ.
ಎದೆಯ ಭಾಗಕ್ಕೆ ಬಲವಾಗಿ ಗುದ್ದಿದ ಪರಿಣಾಮ ಸಂಕೇತ್ ಪ್ರಜ್ಞೆ ಕಳೆದುಕೊಂಡು ಕುಸಿದು ಬಿದ್ದಿದ್ದಾನೆ. ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗ ಮಧ್ಯದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.ಘಟನೆ ಕುರಿತು ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
ಈಗಾಗಲೇ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಐವರು ಅಪರಾಪ್ತರನ್ನು ಅರೆಸ್ಟ್ ಮಾಡಿದ್ದಾರೆ ಎಂದು ಶಿವಮೊಗ್ಗ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಅವರು ಮಾಹಿತಿ ನೀಡಿದ್ದಾರೆ. ಮೃತ ಸಂಕೇತ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸಂಕೇತ್ ಓದಿನಲ್ಲಿ ಚುರುಕಾಗಿದ್ದ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.








