ಬೆಂಗಳೂರು : ವಿದೇಶದಿಂದ ಆಹಾರ ಪೊಟ್ಟಣ ಹಾಗೂ ಲಗೇಜ್ ಬ್ಯಾಗ್ಗಳಲ್ಲಿ ಡ್ರಗ್ಸ್ ಕಳ್ಳ ಸಾಗಾಣಿಕೆಗೆ ಯತ್ನಿಸಿದ್ದ ಮೂವರನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಪ್ರತ್ಯೇಕವಾಗಿ ಬಂಧಿಸಿದ್ದಾರೆ.
ಕಳೆದ ಎರಡು ದಿನಗಳಿಂದ ಕಸ್ಟಮ್ಸ್ ಅಧಿಕಾರಿಗಳು ಈ ಕಾರ್ಯಾಚರಣೆ ನಡೆದಿದ್ದು, ಆರೋಪಿಗಳಿಂದ ಪ್ರತ್ಯೇಕವಾಗಿ ಒಟ್ಟು 3.8 ಕೋಟಿ ಮೌಲ್ಯದ 11 ಕೆಜಿ ಹೈಡೋ ಗಾಂಜಾವನ್ನು ಜಪ್ತಿ ಮಾಡಲಾಗಿದೆ ಎಂದು ಕಸ್ಟಮ್ಸ್ ಪ್ರಕಟಣೆಯಲ್ಲಿ ಹೇಳಿದೆ. ಬ್ಯಾಂಕಾಕ್ನಿಂದ ಕೆಐಎಗೆ ಸೋಮವಾರ ಬಂದಳಿದ ಪೆಡ್ಲರ್ ಅನ್ನು ಬಂಧಿಸಲಾಯಿತು.
ಆತನ ಬಳಿ ಆಹಾರ ಪೊಟ್ಟಣಗಳಲ್ಲಿ ತುಂಬಿದ್ದ 63 ಲಕ್ಷ ಮೌಲ್ಯದ 1.8 ಕೆಜಿ ಹೈಡೋ ಗಾಂಜಾ ಜಪ್ತಿಯಾಗಿದೆ. ಅದೇ ರೀತಿ ಭಾನುವಾರ ಮತ್ತೊಬ್ಬನ ಲಗೇಜ್ ಬ್ಯಾಗ್ನಲ್ಲಿ 31.65 ಲಕ್ಷ ಬೆಲೆಯ ಹೈಡೋ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬ್ಯಾಕಾಂಕ್ನಿಂದ ಕೆಐಎಗೆ ಭಾನುವಾರ ಬಂದಿಳಿದ ಪ್ರಯಾಣಿಕನನ್ನು ಶಂಕೆ ಮೇರೆಗೆ ವಶಕ್ಕೆ ಪಡೆದು ತಪಾಸಣೆ ನಡೆಸಲಾಯಿತು. ಆಗ ಆತನ ಬ್ಯಾಗ್ಗಳಲ್ಲಿ ಅಡಗಿಸಿಟ್ಟಿದ್ದ 2.8 ಕೋಟಿ ಬೆಲೆಯ 8 ಕೆಜಿ ಹೈಡೋ ಗಾಂಜಾ ಜಪ್ತಿ ಯಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.








