ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ ಒಂದೇ ವಾರದಲ್ಲಿ ಎರಡನೇ ಬಲಿಯಾಗಿದೆ. ಇಂದು ಕಾಡಾನೆ ದಾಳಿಯಿಂದ ಮಹಿಳೆ ಬಲಿ ಪ್ರಕರಣ ವಿಕೋಪಕ್ಕೆ ತಿರುಗಿದ್ದು ಪ್ರತಿಭಟನಾ ನಿರತರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದಂತ ಘಟನೆ ನಡೆದಿದೆ.
ಇಂದು ಬೆಳಿಗ್ಗೆ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಸಮೀಪದ ಕಾಫಿ ತೋಟ ಒಂದರಲ್ಲಿ ಕೆಲಸಕ್ಕೆ ತೆರಳಿದ ಕಾರ್ಮಿಕ ಬೋರಮ್ಮನ ಮೇಲೆ ಕಾಡಾನೆ ದಾಳಿ ಮಾಡಿ ತುಳಿದು ಸಾಯಿಸಿದೆ. ಕಳೆದ ಒಂದು ವಾರದ ಮಧ್ಯದಲ್ಲಿ ಆನೆ ತುಳಿತಕ್ಕೆ ಬಲಿಯಾದ ಎರಡನೇ ಪ್ರಕರಣ ಇದಾಗಿದೆ. ಇದರಿಂದ ಕೆರಳಿದ ಸ್ಥಳೀಯರು ಬಾಳೆಹೊನ್ನೂರಿನಲ್ಲಿ ಪ್ರತಿಭಟನೆ ನಡೆಸಿದರು.
ಈ ಹಂತದಲ್ಲಿ ಅಧಿಕಾರಿಗಳು ಮತ್ತು ಪ್ರತಿಭಟನಾ ನಿರತರ ಮಧ್ಯೆ ಮಾತಿನ ಚಿಕಮಕಿ ನಡೆದಿದ್ದು , ಇದು ಒಂದು ಹಂತದಲ್ಲಿ ವಿಕೋಪಕ್ಕೆ ತೆರಳಿ ಕೆಲವರು ಕಲ್ಲು ತೂರಾಟ ನಡೆಸಿದರು ಎನ್ನಲಾಗಿದೆ. ಹೀಗಾಗಿ ಪೊಲೀಸರು ಗಲಭೆ ನಿಯಂತ್ರಿಸಲು ಲಾಠಿ ಪ್ರಹಾರ ನಡೆಸಿದ್ದು, ಪ್ರತಿಭಟನಾ ನಿರತರು ದಿಕ್ಕು ಪಾಲಾಗಿ ಓಡಿದ್ದಾರೆ.
ಮಹಿಳೆ ಮೃತದೇಹ ಇಟ್ಟು ಪ್ರತಿಭಟನೆ ಮಾಡಿದ್ದು , 50 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಪಟ್ಟು ಹಿಡಿದಿದ್ದರು. ಅಲ್ಲಿಯವರೆಗೆ ಶವ ರವಾನಿಸುವುದಿಲ್ಲವೆಂದು ಪ್ರತಿಭಟನೆ ನಿರಂತರು ಎಚ್ಚರಿಕೆ ನೀಡಿದ್ದರು.
ಈ ಮಧ್ಯೆ ಕಾಡಾನೆಯನ್ನು ಸೆರೆಹಿಡಿದಿದ್ದು , ಹಿಡಿದ ಆನೆಯನ್ನು ಪ್ರತಿಭಟನಾ ಸ್ಥಳಕ್ಕೆ ತಂದರೂ ಪ್ರತಿಭಟನಾ ನಿರತರು ತಮ್ಮ ಪಟ್ಟು ಸಡೀಲಿಸಲಿಲ್ಲ. ಅಂತಿಮವಾಗಿ ಪೊಲೀಸ್ ಬಲ ಪ್ರಯೋಗಿಸಿ ಮೃತದೇಹ ರವಾನೆ ಮಾಡಲಾಗಿದೆ. ನೂರಾರು ಪೊಲೀಸರು ಹೋರಾಟಗಾರರನ್ನು ತಳ್ಳಿ ಲಾಠಿ ಬೀಸಿ ಮೃತದೇಹ ರವಾನೆ ಮಾಡಿಸಿದ್ದಾರೆ.
ಆಂಬುಲೆನ್ಸ್ ಗೆ ಜನ ಅಡ್ಡ ನಿಂತರೂ ಜನರನ್ನು ತಳ್ಳಿ ಮೃತದೇಹ ರವಾನಿಸಲಾಗಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಪ್ರತಿಭಟನಾ ನಿರತ ಕೆಲವರನ್ನು ಬಂಧಿಸಿದ್ದು ಇದನ್ನು ಖಂಡಿಸಿ ಜೀಪಿಗೆ ಅಡ್ಡ ನಿಂತಿದ್ದು ಇವರನ್ನು ಚದರಿಸಲು ಪೊಲೀಸರಿಂದ ಲಾಠಿ ಚಾರ್ಚ್ ನಡೆದಿದೆ. ಉದ್ರಿಕ್ತ ಯುವಕರು ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿದ್ದು ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.








