ದಕ್ಷಿಣಕನ್ನಡ : ದಕ್ಷಿಣ ಕನ್ನಡ ಜಿಲ್ಲೆಯ, ಬೆಳ್ತಂಗಡಿ ತಾಲೂಕಿನಲ್ಲಿ ಮಕ್ಕಳು ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ವೇಳೆ ಸ್ಫೋಟಕವೊಂದು ಸ್ಪೋಟಗೊಂಡು ಬಾಲಕನೊಬ್ಬ ಗಾಯಗೊಂಡ ಘಟನೆ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಬಂದಾರು ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ಬಲಿಪೆ ನಿವಾಸಿಗಳಾದ ಮುಕುಂದ ಮತ್ತು ಜಯಶ್ರೀ ದಂಪತಿಯ ಪುತ್ರ ಅಭೀಶ್ (11) ಅವಘಡದಲ್ಲಿ ಸಣ್ಣಪುಟ್ಟ ಗಾಯಗಳಾಗಿದ್ದು ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಮನೆಯ ಅಂಗಳದಲ್ಲಿ ಇಬ್ಬರು ಮಕ್ಕಳು ಆಟವಾಡುತ್ತಿದ್ದ ವೇಳೆ ಚೆಂಡಿನಂತಿದ್ದ ವಸ್ತುವೊಂದು ಪತ್ತೆಯಾಗಿದ್ದ.
ಅದನ್ನು ತೆಗೆದುಕೊಂಡು ಕ್ರಿಕೆಟ್ ಆಡಲು ಮುಂದಾಗಿದ್ದಾರೆ. ಒಬ್ಬ ಬೌಲಿಂಗ್ ಮಾಡಿದ್ದು, ಇನ್ನೊಬ್ಬ ಬ್ಯಾಟಿಂಗ್ ಮಾಡಿದ ಸಂದರ್ಭ ಸ್ಫೋಟಗೊಂಡಿದೆ ಎನ್ನಲಾಗಿದೆ. ಸ್ಫೋಟದ ತೀವ್ರತೆಗೆ ಅಭೀಶ್ ಗಾಯಗೊಂಡಿದ್ದಾನೆ. ಗಾಯಗೊಂಡ ಬಾಲಕನನ್ನು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.








